ಬೆಂಗಳೂರು, ಮೇ20(Daijiworld News/SS): ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ ಎಂದು ಖ್ಯಾತ ನಟ ಹಾಗೂ ಬೆಂಗಳೂರು ಕೇಂದ್ರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹೇಳಿದ್ದಾರೆ.
ಮೇ19ರಂದು ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ದೇಶದಲ್ಲಿ ಇನ್ನೊಮ್ಮೆ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿತ್ತು. ದೇಶದಲ್ಲಿ ಎನ್.ಡಿ.ಎ ಪಕ್ಷಕ್ಕೆ ಮುನ್ನೂರಕ್ಕೆ ಹೆಚ್ಚು ಸ್ಥಾನ, ರಾಜ್ಯದಲ್ಲಿ ಸಹ ಬಿಜೆಪಿಗೆ ಗರಿಷ್ಟ ಸ್ಥಾನ ಲಭ್ಯವಾಗಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್'ಗಳಲ್ಲಿ ಬಹಿರಂಗವಾಗಿದೆ.
ಇದೀಗ ಈ ಕುರಿತು ಪ್ರತಿಕ್ರಿಯಿಸಿರುವ ಪರ್ಕಾಶ್ ರೈ, ಎಕ್ಸಿಟ್ ಪೋಲ್'ಗಳು ಸುಳ್ಳಾಗಲಿದೆ. ಅವರು ಕೆಲವಷ್ಟು ದಿನ ಕನಸು ಕಾಣಲಿ, ಆದರೆ ಆ ಸ್ವಪ್ನ ದೀರ್ಘವಾಗೇನೂ ಉಳಿಯುವುದಿಲ್ಲ. ನಂತರ ಅವರ ಪಾಲಿಗೆ ದುಃಸ್ವಪ್ನ ಮರುಕಳಿಸುತ್ತದೆ. ನಾಗರಿಕರು ಈ ಎಕ್ಸಿಟ್ ಪೋಲ್'ಗಳನ್ನು ಸುಳ್ಳಾಗಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಮೇ 23ರಂದು ಸಾರ್ವಜನಿಕರು ಈ ಸಮೀಕ್ಷೆಗಳನ್ನು ಸುಳ್ಳಾಗಿಸುತ್ತಾರೆ ಎಂಬ ನಂಬಿಕೆ ನನಗಿದೆ. ಅಲ್ಲಿಯ ತನಕ ಬಾಪೂಜಿ ನಮಗೆ ಕಲಿಸಿದಂತೆ ಹಾಡುತ್ತಾ ಸಂಭ್ರಮಿಸಿ ಎಂದು ವ್ಯಂಗ್ಯವಾಡಿದ್ದಾರೆ.