ನವದೆಹಲಿ, ಮೇ.20(Daijiworld News/SS): ಮೇ19ರಂದು ಹೊರಬಿದ್ದ ಚುನಾವಣೋತ್ತರ ಸಮೀಕ್ಷೆಗಳ ಪೈಕಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ದೇಶದಲ್ಲಿ ಇನ್ನೊಮ್ಮೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿತ್ತು. ದೇಶದಲ್ಲಿ ಎನ್.ಡಿ.ಎ ಪಕ್ಷಕ್ಕೆ ಮುನ್ನೂರಕ್ಕೆ ಹೆಚ್ಚು ಸ್ಥಾನ, ರಾಜ್ಯದಲ್ಲಿ ಸಹ ಬಿಜೆಪಿಗೆ ಗರಿಷ್ಟ ಸ್ಥಾನ ಲಭ್ಯವಾಗಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್'ಗಳಲ್ಲಿ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಂತಸಗೊಂಡಿದ್ದಾರೆ.
ಲೋಕಸಭೆ ಚುನಾವಣೆ 2019ರ ಮತದಾನ ಮುಕ್ತಾಯವಾಗುತ್ತಲೇ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಲಭಿಸಲಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಾಗಿ ಹೇಳಿ ವಿವಿಧ ಸಂಸ್ಥೆಗಳು ಚುನಾವಣೋತ್ತರ ಸಮೀಕ್ಷೆ ಬಿಡುಗಡೆ ಮಾಡಿದವು. ಇದರಿಂದ ಉತ್ತೇಜಿತರಾಗಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಎನ್ಡಿಎ ಮೈತ್ರಿಕೂಟದ ಎಲ್ಲ ನಾಯಕರಿಗೂ ಔತಣಕೂಟ ಏರ್ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ನವದೆಹಲಿಯಲ್ಲಿ (ಮೇ20) ಮಂಗಳವಾರ ನಡೆಯಲಿರುವ ಔತಣಕೂಟಕ್ಕೆ ಎನ್ಡಿಎ ಮೈತ್ರಿಕೂಟದ ಎಲ್ಲ ನಾಯಕರು ಆಗಮಿಸುವ ನಿರೀಕ್ಷೆಯಿದೆ. ಇದಾದ ಬಳಿಕ ಕೇಂದ್ರ ಸಚಿವರೆಲ್ಲರ ಸಭೆ ಕೂಡ ನಡೆಯಲಿರುವುದಾಗಿ ಹೇಳಲಾಗುತ್ತಿದೆ.
ಚುನಾವಣೋತ್ತರ ಸಮೀಕ್ಷೆಯಲ್ಲಿ 2014ರ ಸುನಾಮೋ ಅಲೆಗಳಿಗಿಂತಲೂ 2019ರ ನರೇಂದ್ರ ಮೋದಿ ಅವರ ಪ್ರಭಾವದ ಅಲೆಗಳು ಅಗಾಧವಾಗಿವೆ. ಇದರಿಂದಾಗಿ ನರೇಂದ್ರ ಮೋದಿ ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಗರಿಷ್ಠ ಸ್ಥಾನಗಳೊಂದಿಗೆ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತ ಎಂದು ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಆದರೆ ನಿಜಾಂಶ ಫಲಿತಾಂಶ ಪ್ರಕಟಗೊಂಡ ನಂತರವಷ್ಟೇ ತಿಳಿದುಬರಬೇಕಿದೆ.