ಬೆಂಗಳೂರು,ಮೇ21(DaijiworldNews/AZM):ಕಾಂಗ್ರೆಸ್ ನ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ಜೊತೆ ಉಳಿದ ಅತೃಪ್ತ ಶಾಸಕರು ರಾಜಿನಾಮೆಗೆ ಮುಂದಾಗಿದ್ದಾರೆ ಎಂದು ಹೇಳಿದ್ದು, ಇದೀಗ ಹಿಂದೇಟು ಹಾಕಿದ್ದಾರೆ.ಈ ಹಿನ್ನಲೆ ಬಿಜೆಪಿ ರೂಪಿಸಿರುವ ಆಪರೇಷನ್ ಕಮಲ ಯೋಜನೆ ಸಫಲಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಆದ ಬೆನ್ನಲ್ಲೇ ಆಪರೇಷನ್ ಕಮಲದ ಭೀತಿ ಮೈತ್ರಿಯನ್ನು ಕಾಡಿತ್ತು. ಒಂದೆರಡು ಅತೃಪ್ತರು ಬಹಿರಂಗವಾಗಿಯೇ ಬಂಡಾಯ ವ್ಯಕ್ತಪಡಿಸಿದ್ದರು. ಆದರೆ, ಕೆಲ ರೆಬೆಲ್ ಶಾಸಕರು ಈವರೆಗೆ ಬಹಿರಂಗವಾಗಿ ಪಕ್ಷ ಬಿಡುವ ಬಗ್ಗೆ ಹೇಳಿಕೆ ನೀಡಿಲ್ಲ. ಈಗ ಅವರು ಪಕ್ಷ ಬಿಡಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಮುಂದಿನ 20 ವರ್ಷಗಳ ರಾಜಕೀಯ ಭವಿಷ್ಯ ದೃಷ್ಟಿಯಲ್ಲಿಟ್ಟುಕೊಂಡು ರಾಜೀನಾಮೆ ನೀಡಲು ರೆಬೆಲ್ಗಳು ಹಿಂಜರಿಯುತ್ತಿದ್ದಾರಂತೆ. ಇತ್ತೀಚೆಗೆ ನಾಗೇಂದ್ರ, ಭೀಮಾನಾಯ್ಕ್, ಮಹೇಶ ಕಮಠಳ್ಳಿ, ಪ್ರತಾಪಗೌಡ ಪಾಟೀಲ್, ಬಿ ಸಿ ಪಾಟೀಲ, ಶಿವರಾಮ ಹೆಬ್ಬಾರ್ ಸೇರಿ ಇತರೆ ನಾಯಕರು ರಮೇಶ್ ಜಾರಕಿಹೊಳಿ ಜೊತೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಹೀಗೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಅತೃಪ್ತರ ಈ ನಡೆ ರಮೇಶ್ ಜಾರಕಿಹೊಳಿಯನ್ನು ಏಕಾಂಗಿ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಆಪರೇಷನ್ ಕಮಲದ ರುವಾರಿ ಎನ್ನಲಾಗುತ್ತಿದೆ. ಆದರೆ, ಪಕ್ಷದಲ್ಲಿ ಇವರ ವರ್ಚಸ್ಸು ಕಡಿಮೆ ಆಗುತ್ತಿದೆ ಎನ್ನುವ ಮಾತಿದೆ. ಒಂದೊಮ್ಮೆ ಅವರನ್ನು ನಂಬಿ ಬಿಜೆಪಿಗೆ ಸೇರಿ ಅತಂತ್ರವಾಗಿಬಿಟ್ಟರೆ ಎನ್ನುವ ಭಯ ಉಳಿದ ಅತೃಪ್ತ ಶಾಸಕರನ್ನು ಕಾಡುತ್ತಿದೆ ಎನ್ನಲಾಗಿದೆ.