ನವದೆಹಲಿ,ಮೇ 21 (Daijiworld News/MSP): ಭಾರತದ ಪ್ರಜಾತಂತ್ರದ ಹಬ್ಬ ಮುಗಿದಾಗಿದೆ. ಇನ್ನೇರಡು ದಿನಗಳಲ್ಲಿ ಫಲಿತಾಂಶವೂ ಹೊರಬೀಳುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸಾರ್ವಕಾಲಿಕ ದಾಖಲೆ ಪ್ರಮಾಣದಲ್ಲಿ ಮತದಾನವಾಗಿದೆ ಅನ್ನೋ ವಿಚಾರ ತಿಳಿದುಬಂದಿದೆ.
ಪ್ರಸಕ್ತ ಲೋಕಸಭಾ ಚುನಾವಣೆಯ 7 ಹಂತಗಳಲ್ಲಿ ನಡೆದಿದ್ದು ಒಟ್ಟಾರೆ ದೇಶದಲ್ಲಿ 67.11ರಷ್ಟು ಮತದಾನವಾಗಿದ್ದು, ಇಷ್ಟೊಂದು ಪ್ರಮಾಣದಲ್ಲಿ ಮತದಾನ ದಾಖಲಾಗಿರುವುದು ದೇಶದ ಇತಿಹಾಸದಲ್ಲೇ ಇದೇ ಮೊದಲು ಎಂದು ಚುನಾವಣಾ ಆಯೋಗ ಸೋಮವಾರ ಮಾಹಿತಿ ನೀಡಿದೆ.
ಒಟ್ಟು 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ವೆಲ್ಲೂರು ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಅಕ್ರಮ ಅಧಿಕವಾದ್ದರಿಂದ ಅಲ್ಲಿ ಮತದಾನ ರದ್ದಾಗಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 65.95ರಷ್ಟು ಮತದಾನವಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಶೇಕಡಾ 1.16ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಮತದಾನದ ಪ್ರಮಾಣದಲ್ಲಿ ಅತೀ ಹೆಚ್ಚು ಏರಿಕೆಯಾಗಿದೆ. ಕಳೆದ ಬಾರಿಗಿಂತ ಶೇಕಡಾ 9.6ರಷ್ಟು ಮಧ್ಯಪ್ರದೇಶದಲ್ಲಿ ಹೆಚ್ಚಳವಾಗಿದ್ದು, ಒಟ್ಟು 71.2ರಷ್ಟು ಮತದಾನವಾಗಿದೆ. ಹಾಗೇ ಈ ಬಾರಿ ಜಮ್ಮು ಕಾಶ್ಮೀರದಲ್ಲಿ ಮತದಾನದ ಪ್ರಮಾಣ ಭಾರೀ ಕುಸಿತ ಕಂಡಿದೆ. 2014ರ ಲೋಕಕದನದಲ್ಲಿ 49.7ರಷ್ಟು ಮತದಾನವಾಗಿತ್ತು. ಆದ್ರೆ ಈ ಬಾರಿ ಕೇವಲ 29.4 ರಷ್ಟು ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದಾರೆ.