ಅಯೋಧ್ಯೆ,ಮೇ21(DaijiworldNews/AZM):ಶ್ರೀರಾಮ ಹುಟ್ಟಿದ ಆಯೋಧ್ಯೆಯಲ್ಲಿಯೇ ಮುಸಲ್ಮಾನ ಬಾಂಧವರಿಗಾಗಿ ಸೀತಾ ರಾಮ ದೇವಾಲಯದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು.
ರಂಜಾನ್ ತಿಂಗಳ ಉಪವಾಸ ಮುಸ್ಲಿಂ ಬಾಂಧವರಿಗೆ ಅತಿ ಪವಿತ್ರವಾದುದು. ಹಾಗೂ ಉಪವಾಸ ಹಿಡಿಯುವುದು ಕಡ್ಡಾಯವಾಗಿದೆ. ಅದು ಈ ಬೇಸಿಗೆಯ ಬಿಸಿ ತಾಪದಲ್ಲಿ ಮುಸಲ್ಮಾನ ಬಾಂಧವರಿಗೆ ಉಪವಾಸ ಹಿಡಿಯುವುದು ಅತೀ ಕಠಿಣವಾಗಿದೆ. ಒಂದು ತುತ್ತು ಅನ್ನಕ್ಕೂ ಗತಿ ಇಲ್ಲದೆ ಹಸಿದವನ ನೋವು ಸಾಮಾನ್ಯ ಮನುಷ್ಯನು ತಿಳಿಯಬೇಕು ಎನ್ನುವ ಉದ್ದೇಶದಿಂದ ರಮ್ ಝಾನ್ ಉಪವಾಸವನ್ನು ಆಚರಿಸಲಾಗುತ್ತದೆ.
ರಮ್ ಝಾನ್ ಉಪವಾಸದ ಮಹತ್ವ ಮುಸಲ್ಮಾನ ಬಾಂಧವರಿಗೆ ಮಾತ್ರವಲ್ಲ, ಭಾರತದಲ್ಲಿ ಸಾಮಾನ್ಯವಾಗಿ ಎಲ್ಲಾ ಜನರಿಗೆ ತಿಳಿದಿರುವ ವಿಷಯ. ಈ ಹಿನ್ನಲೆ ಶ್ರೀರಾಮ ಹುಟ್ಟಿದ ನೆಲದಲ್ಲಿ ಅಂದರೆ ಅಯೋಧ್ಯಾದಲ್ಲಿ ಮುಸಲ್ಮಾನ ಬಾಂಧವರಿಗೆ ಇಫ್ತಾರ್ ಕೂಟವನ್ನು ಏರ್ಪಡಿಸಲಾಗಿತ್ತು. ಸೀತಾ ರಾಮ ದೇವಾಲಯದಲ್ಲಿ ದೇವಸ್ಥಾನದ ಟ್ರಸ್ಟ್ ವತಿಯಿಂದ ಮುಸ್ಲಿಂ ಸಮುದಾಯಕ್ಕೆ ಸಂಘಟಿತ ರೋಜಾ ಇಫ್ತಾರ್ ಆಯೋಜಿಸಲಾಗಿತ್ತು. ಈ ರೋಜಾ ಇಫ್ತಾರ್ನಲ್ಲಿ ಮುಸ್ಲಿಂ ಸಮುದಾಯದ ಜನರನ್ನು ಹೊರತುಪಡಿಸಿ, ನಗರದ ಕೆಲವು ಸಾಧು-ಸಂತರು ಕೂಡ ಭಾಗಿಯಾಗಿದ್ದರು.
ದೇವಸ್ಥಾನದ ಟ್ರಸ್ಟ್ ವತಿಯಿಂದ ಮೂರನೇ ಬಾರಿಗೆ ರೋಜಾ ಇಫ್ತಾರ್ ಏರ್ಪಡಿಸಲಾಗಿದೆ. ಇದು ಮುಂದೆಯೂ ಹೀಗೆ ಮುಂದುವರೆಯಲಿದೆ ಎಂದು ದೇವಾಲಯದ ಟ್ರಸ್ಟಿಗಳು ಹೇಳಿದ್ದಾರೆ. ನಾವು ಸಾಮುದಾಯಿಕ ಸಾಮರಸ್ಯದ ಉದಾಹರಣೆಗಳನ್ನು ನೀಡಬೇಕು ಮತ್ತು ಪ್ರತಿ ಉತ್ಸವವನ್ನು ಸಂತೋಷಭರಿತ ಆಚರಣೆಯನ್ನು ಒಗ್ಗೂಡಿ ಆಚರಿಸಬೇಕೆಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೋಜಾ ಇಫ್ತಾರ್ ವೇಳೆ ಸಾಧುಗಳು, ಮುಸ್ಲಿಮರಿಗೆ ಕರ್ಜೂರದ ಜೊತೆಗೆ ದೇವಾಲಯದ ಪ್ರಸಾದ ಲಡ್ಡುವನ್ನು ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಹಾಜರಿದ್ದ ಎಲ್ಲಾ ಹಿಂದು-ಮುಸ್ಲಿಂ ಮತ್ತು ಸಿಖ್ ಪ್ರತಿನಿಧಿಗಳು ಕೋಮು ಸಾಮರಸ್ಯ ಮತ್ತು ಶಾಂತಿಗಾಗಿ ಶಪಥ ಮಾಡಿದರು.