ನವದೆಹಲಿ,ಮೇ 21 (Daijiworld News/MSP): ಲೋಕಸಭೆ ಚುನಾವಣೆ ಮುಗಿದ ಬಳಿಕ ಈಗ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುತ್ತಾ ಸುಳ್ಳಾಗುತ್ತಾ ಎಂಬ ಚರ್ಚೆಗಳು ಪ್ರಾರಂಭವಾಗಿದ್ದು, ಇದರ ನಡುವೆ ಪರಸ್ಪರ ವ್ಯಂಗ್ಯಭರಿತ ಟೀಕೆಗಳು, ಆರೋಪಗಳು ಇವಿಎಂ ಕುರಿತ ಅನುಮಾನಗಳು ರಾಜಕೀಯ ವಲಯದಲ್ಲಿ ಚುರುಕಾಗತೊಡಗಿದೆ.
ಎಕ್ಸಿಟ್ ಪೋಲ್ ಫಲಿತಾಂಶ ಹೊರಬಿದ್ದ ಹಿನ್ನಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ತಮ್ಮ ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ಈ ನಡುವೆ ಲೋಕಸಭೆ ಚುನಾವಣೆ ಚುನಾವಣೋತ್ತರ ಸಮೀಕ್ಷೆಗಳನ್ನು ಯಾರು ಕೂಡಾ ಗಂಭೀರವಾಗಿ ಗಣನೆಗೆ ತೆಗೆದುಕೊಳ್ಳಬೇಡಿ.ಇದೆಲ್ಲವೂ ಗಾಳಿ ಸುದ್ದಿಯಾಗಿದ್ದು ನಂಬಿಕೆಗೆ ಅರ್ಹವಾಗಿಲ್ಲ. ಚುನಾವಣೋತ್ತರ ಸಮೀಕ್ಷೆ ನಮ್ಮ ನೈತಿಕ ಸ್ಥೈರ್ಯ ಕಸಿದುಕೊಳ್ಳುವುದಕ್ಕಾಗಿ ಮಾಡಲಾಗಿದೆ ಎಂಬುವುದು ತಿಳಿದಿರಲಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ನಾವು ಪಟ್ಟ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಇದೆಲ್ಲವೂ ಊಹೆಗಳನ್ನು ನಂಬುವ ಅಗತ್ಯವಿಲ್ಲ. ಹೀಗಾಗಿ ಕಾರ್ಯಕರ್ತರೆಲ್ಲರೂ ಮತ ಎಣಿಕೆ ಕೇಂದ್ರಗಳನ್ನು ಎಚ್ಚರಿಕೆಯಿಂದ ಕಾಯಬೇಕು. ಎಲ್ಲರೂ ಜಾಗೃತರಾಗಿರಬೇಕು ಎಂದಿದ್ದಾರೆ.
ಸಮೀಕ್ಷೆಗಳು ಎನ್ ಡಿ ಎ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ಪ್ರಕಟಿಸಿದೆ.