ಬೆಂಗಳೂರು, ಆ.03(DaijiworldNews/AA): 10 ವರ್ಷ ನಾವೇ ಸರ್ಕಾರದಲ್ಲಿ ಇರುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಆದರೆ ಈ ಸರ್ಕಾರ 10 ತಿಂಗಳು ಮುಂದುವರೆಯಲಿ ನೋಡೋಣ. ನಿಮ್ಮ ಪಾಪದ ಕೊಡ ತುಂಬಿದೆ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಪಾದಯಾತ್ರೆ ಮೈಸೂರು ತಲಪುವವರೆಗೆ ಈ ಸರ್ಕಾರದ ವಿಕೆಟ್ಗಳು ಬೀಳಬೇಕು. ಅದು ನಾಯಕನಿಂದಲೇ ಶುರುವಾಗಬೇಕು. ನೀವು ಮುಡಾದ ಬಗ್ಗೆ ಮಾತನಾಡುತ್ತೀರಾ? ಅದರ ಬಗ್ಗೆ ಮಾತಾಡುವುದಕ್ಕೆ ನಿಮಗೆ ಯಾವ ನೈತಿಕತೆ ಇದೆ. 14 ಸೈಟ್ ಯಾಕೆ? ಎಷ್ಟು ಬೇಕಾದರೂ ಕಾನೂನು ಪ್ರಕಾರ ಪಡೆದುಕೊಳ್ಳಲಿ. ಇವರು ಕಾನೂನು ಮೀರಿ ಸೈಟ್ ಪಡೆದಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರೇ ಅದು ಯಾರ ಆಸ್ತಿ. ಮುಡಾ ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನು ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ? ಎಂದು ಕಿಡಿಕಾರಿದ್ದಾರೆ.