ತಿರುವನಂತಪುರಂ, ಆ.03(DaijiworldNews/AA): ಭೂಕುಸಿತ ಪೀಡಿತ ವಯನಾಡಿನಲ್ಲಿ ಸಂತ್ರಸ್ತರ ರಕ್ಷಣೆಗೆ ನಿಂತ ಭಾರತೀಯ ಯೋಧರಿಗೆ 3ನೇ ತರಗತಿ ಬಾಲಕನೋರ್ವ ಹೃದಯಸ್ಪರ್ಶಿ ಪತ್ರ ಬರೆದಿದ್ದು, ನಾನೂ ಭಾರತೀಯ ಸೇನೆ ಸೇರ್ತೀನಿ ಎಂದು ತಿಳಿಸಿದ್ದಾನೆ.
ಭಾರತೀಯ ಸೇನೆಗೆ ಪತ್ರ ಬರೆದಿರುವ 3ನೇ ತರಗತಿ ವಿದ್ಯಾರ್ಥಿ ಮಾಸ್ಟರ್ ರಾಯನ್, ಸೈನಿಕರ ರಕ್ಷಣಾ ಕಾರ್ಯಾಚರಣೆ ಮೆಚ್ಚಿ ಮುಂದೊಂದು ದಿನ ತಾನೂ ಸೇನೆಗೆ ಸೇರುತ್ತೇನೆ ಎಂದು ಮಲಯಾಳಂ ಭಾಷೆಯಲ್ಲಿ ಭಾರತೀಯ ಸೇನೆಗೆ ಪತ್ರ ಬರೆದಿದ್ದಾನೆ. ಬಾಲಕ ಬರೆದ ಈ ಪತ್ರದಲ್ಲಿ, ಆತ್ಮೀಯ ಭಾರತೀಯ ಸೇನೆ, ನನ್ನ ಪ್ರೀತಿಯ ವಯನಾಡ್ ಭಾರಿ ಭೂಕುಸಿತದಿಂದ ಅಪ್ಪಳಿಸಿತು. ವಿನಾಶವನ್ನು ಸೃಷ್ಟಿಸಿತು. ಶಿಲಾಖಂಡರಾಶಿಗಳ ಅಡಿಯಲ್ಲಿ ಸಿಲುಕಿರುವ ಜನರನ್ನು ನೀವು ರಕ್ಷಿಸುತ್ತಿರುವುದನ್ನು ನೋಡಿ ನನಗೆ ಹೆಮ್ಮೆ ಮತ್ತು ಸಂತೋಷವಾಯಿತು ಎಂದು ಕೃತಜ್ಞತೆ ಸಲ್ಲಿಸಿದ್ದಾನೆ.
ಸಂತ್ರಸ್ತರ ಹಸಿವು ನೀಗಿಸುವ ಮತ್ತು ಸೇತುವೆಯನ್ನು ನಿರ್ಮಿಸುವ ವೀಡಿಯೊವನ್ನು ನಾನು ನೋಡಿದೆ. ಆ ದೃಶ್ಯವು ನನ್ನ ಎದೆಯಾಳಕ್ಕೆ ಇಳಿಯಿತು. ನಾನು ಮುಂದೊಂದು ದಿನ ಭಾರತೀಯ ಸೇನೆಗೆ ಸೇರಲು ಮತ್ತು ನನ್ನ ರಾಷ್ಟ್ರವನ್ನು ರಕ್ಷಿಸಲು ಆಶಿಸುತ್ತೇನೆ ಎಂದು ಬಾಲಕ ಪತ್ರದಲ್ಲಿ ಬರೆದಿದ್ದಾನೆ.
ಇನ್ನು ಬಾಲಕನ ಪತ್ರಕ್ಕೆ ಪ್ರತಿಕ್ರಿಸಿರುವ ಭಾರತೀಯ ಸೇನೆ, 'ಯುವ ಯೋಧನಿಗೆ' ಧನ್ಯವಾದ ಎಂದಿದೆ. ನಿಮ್ಮ ಮನದಾಳದ ಮಾತುಗಳು ನಮ್ಮನ್ನು ಆಳವಾಗಿ ಮುಟ್ಟಿವೆ. ಸಂಕಷ್ಟದ ಸಮಯದಲ್ಲಿ, ನಾವು ಭರವಸೆಯ ದಾರಿದೀಪವಾಗಲು ಗುರಿ ಹೊಂದಿದ್ದೇವೆ. ನಿಮ್ಮ ಪತ್ರವು ಈ ಧ್ಯೇಯವನ್ನು ಪುನರುಚ್ಚರಿಸಿದೆ. ನಿಮ್ಮಂತಹ ವೀರರು ನಮ್ಮ ಕೈಲಾದದ್ದನ್ನು ನೀಡಲು ನಮಗೆ ಸ್ಫೂರ್ತಿ ನೀಡುತ್ತಾರೆ. ನೀವು ಸಮವಸ್ತ್ರವನ್ನು ಧರಿಸಿ ನಮ್ಮೊಂದಿಗೆ ನಿಲ್ಲುವ ದಿನಕ್ಕಾಗಿ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಒಟ್ಟಾಗಿ, ನಾವು ನಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತೇವೆ. ಯುವ ಯೋಧರೇ, ನಿಮ್ಮ ಧೈರ್ಯ ಮತ್ತು ಸ್ಫೂರ್ತಿಗಾಗಿ ಧನ್ಯವಾದಗಳು ಎಂದು ತಿಳಿಸಿದೆ.