ರಾಮನಗರ, ಆ.04(DaijiworldNews/AK): ಬಿಜೆಪಿ-ಜೆಡಿಎಸ್ ಮಾಡುತ್ತಿರುವುದು ಪಾದಯಾತ್ರೆಯಲ್ಲ, ಪಾಪ ವಿಮೋಚನಾ ಪಾದಯಾತ್ರೆ. ಅವರ ಎಲ್ಲಾ ಪಾಪ ವಿಮೋಚನೆ ಮಾಡಿಕೊಳ್ಳಲು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಜನಾಂದೋಲನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಾದಯಾತ್ರೆ ಭ್ರಷ್ಟಾಚಾರದಿಂದ ಭ್ರಷ್ಟಾಚಾರಕ್ಕೋಸ್ಕರ ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಕುಟುಂಬದವರ ಪಾಪದ ಕೊಡ ತುಂಬಿ ತುಳುಕುತ್ತಿದೆ. ಅವರ ಪಾಪಗಳನ್ನ ಜನರಿಗೆ ತಿಳಿಸಲು ಪಾದಯಾತ್ರೆ ಮಾಡ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿಯಯವರು ಕುಮಾರಸ್ವಾಮಿಗೆ ಹಿಂದೆ ಯಾವ ಪ್ರಶ್ನೆ ಕೇಳಿದ್ದರೋ, ಅದಕ್ಕೆ ಮೊದಲು ಉತ್ತರ ಕೊಡಬೇಕು. ಶಾಸಕ ಯತ್ನಾಳ್, ಮಾಜಿ ಸಿಎಂ ಬಿಎಸ್ವೈ ಹಾಗೂ ಅವರ ಮಗ ವಿಜಯೆಂದ್ರಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ನಿಮ್ಮ ಪಾಪ ವಿಮೋಚನೆ ಪಾದಯಾತ್ರೆಯಲ್ಲಿ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಈ ಭಾಗದಲ್ಲಿ ಹೆಚ್ಡಿಕೆ ಆಯ್ಕೆ ಆಗಿ, ಇಲ್ಲಿ 6 ವರ್ಷ ಅಧಿಕಾರ ನಡೆಸಿದ್ದೀರಿ. ನೀವು ರೈತನ ಮಗ ಪಾಪ, ಈಗ ಪ್ಯಾಂಟ್ ಬಿಚ್ಚಿ ಪಂಚೆ ಹಾಕಿದ್ದೀರಿ. ನಮ್ಮ ಕಡೆ ಒಂದು ಗಾದೆ ಇದೆ. ಹುಟ್ಟಿದ ಕರು ಎಲ್ಲಾ ಗೂಳಿ ಆಗಲು ಸಾಧ್ಯವಿಲ್ಲ. ಹಾಗೆ ಎಲ್ಲರೂ ರೈತರಾಗಲು ಸಾಧ್ಯವಿಲ್ಲ. ಕುಮಾರಣ್ಣ ನಿನ್ನ ಕೈಯಲ್ಲಿ ಬಡವರಿಗೆ ಜಮೀನು ಕೊಡಲು ಆಗಲಿಲ್ಲ. ಒಂದು ಸೈಟ್ ಹಂಚಿಕೆ ಮಾಡಿಲ್ಲ.ನಾನು ಈ ಕ್ಷೇತ್ರದಲ್ಲಿ ಬಂದು ಜನಸಂದರ್ಶನ ಸಭೆ ಮಾಡಿದ್ದೆ. 22 ಸಾವಿರ ಜನ ಬಂದು ಅರ್ಜಿ ಕೊಟ್ಟಿದ್ದಾರೆ. ಇಷ್ಟು ದಿನ ನೀವು ಇಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಹಿಟ್ ಅಂಡ್ ರನ್ ಕುಮಾರಸ್ವಾಮಿ ನೀನು. ನೀನು ಎಲ್ಲರನ್ನೂ ಹೆದರಿಸಿದ ಹಾಗೆ ಬಿಜೆಪಿಯವ್ರನ್ನೂ ಹೆದರಿಸಲು ಹೋದೆ. ಪಾದಯಾತ್ರೆ ಬಗ್ಗೆ ನೀನೊಂದು ಮಾತು, ನಿನ್ನ ಮಗ ಒಂದು ಮಾತು, ಜಿಟಿಡಿ ಒಂದು ಮಾತು ಆಡಿದ್ದೀರಿ. ಈಗ ಪಾದಯಾತ್ರೆಗೆ ಬಂದು ಹೆಜ್ಜೆ ಹಾಕ್ತಿದ್ದೀಯಾ? ನಿನಗೆ ನೈತಿಕತೆ ಇದ್ಯಾ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.