ಬೆಂಗಳೂರು, ಆ.05(DaijiworldNews/AK):ಬಿಜೆಪಿ- ಜೆಡಿಎಸ್ ಪಾದಯಾತ್ರೆ ಪರಿಣಾಮವಾಗಿ ಕಾಂಗ್ರೆಸ್ಸಿಗರಿಗೆ ಚಿಂತೆ ಆರಂಭವಾಗಿದೆ. ನಿದ್ರೆ ಬಾರದ ಸ್ಥಿತಿ ಉಂಟಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ಮೈಸೂರು ಚಲೋ ಪಾದಯಾತ್ರೆಯು ಎರಡನೇ ದಿನವಾದ ಇಂದು ಸಂಜೆ ರಾಮನಗರಕ್ಕೆ ತಲುಪಿದ ಸಂದರ್ಭದಲ್ಲಿ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರರಿಗೂ ನಿದ್ರೆ ಬರುತ್ತಿಲ್ಲ. ಒಂದೆಡೆ ಮುಖ್ಯಮಂತ್ರಿಯವರಿಗೆ ಕುರ್ಚಿ ಕಳಕೊಳ್ಳುವ ಭಯದಿಂದ ನಿದ್ರೆ ಬರುತ್ತಿಲ್ಲ. ಡಿಸಿಎಂ ಅವರಿಗೆ ಖಾಲಿಯಾದ ಕುರ್ಚಿ ಮೇಲೆ ಕೂರುವ ಆಸೆಯಿಂದ ನಿದ್ರೆ ಬರುತ್ತಿಲ್ಲ ಎಂದು ವಿವರಿಸಿದರು.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನಮ್ಮ ಹೋರಾಟದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವ ವರೆಗೂ ನಮ್ಮ ಹೋರಾಟದ ಕಿಚ್ಚು ಆರುವುದಿಲ್ಲ ಎಂದು ಅವರು ಸ್ಪಷ್ಟವಾಗಿ ನುಡಿದರು.
ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ವಾಲ್ಮೀಕಿ ನಿಗಮದ 187 ಕೋಟಿ ಹಣವನ್ನು ಲೂಟಿ ಮಾಡಿ, ಚುನಾವಣೆಗೆ ಹೆಂಡ ಖರೀದಿ ಮಾಡಿದ್ದನ್ನು ಕೇಳಿದ್ದೇವೆ. ಗಾಂಧಿ ಕುಟುಂಬಕ್ಕೆ ಕರ್ನಾಟಕದ ತೆರಿಗೆದಾರರ ಹಣವನ್ನು ಕಪ್ಪ ಕಾಣಿಕೆಯಾಗಿ ಕೊಡಲು ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿತ್ತು ಎಂದು ಅವರು ಟೀಕಿಸಿದರು.
ಅಧಿಕಾರಕ್ಕೆ ಬರಲು ನಾವು ಹೋರಾಟ, ಪಾದಯಾತ್ರೆ ಮಾಡುತ್ತಿಲ್ಲ. ಈ ನಾಡಿನ ತುಳಿತಕ್ಕೆ ಒಳಗಾದ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ನಾಡಿನ ಆರೂವರೆ ಕೋಟಿ ಜನರ ಧ್ವನಿಯಾಗಿ, ಬಡವರು, ರೈತರು, ದೀನದಲಿತರ ಪರವಾಗಿ ರಾಜ್ಯದ ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತಿದ್ದೇವೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಸದನದಲ್ಲಿ ನಮ್ಮ ಪ್ರಶ್ನೆಗೆ ಉತ್ತರಿಸಲಾಗದೆ ಓಡಿ ಹೋದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಇದೀಗ ನಮ್ಮನ್ನೇ ಪ್ರಶ್ನಿಸುತ್ತಿದ್ದಾರೆ. ಮೈಸೂರಿನ ಲಕ್ಷಾಂತರ ಬಡವರು ಮುಡಾಕ್ಕೆ ನಿವೇಶನಕ್ಕೆ ಅರ್ಜಿ ಹಾಕಿ ಕಾಯುತ್ತಿದ್ದರು. ಬಡವರಿಗೆ ಮೀಸಲಿಟ್ಟ ನಿವೇಶನಗಳನ್ನು ತಮ್ಮ ಕುಟುಂಬಕ್ಕೆ ಪಡೆದುಕೊಂಡಿದ್ದಾರೆ; ಅಲ್ಲದೆ ಸಾವಿರಾರು ಜನ ಆಪ್ತರಿಗೆ ಕೊಡಿಸಿದ್ದಾರೆ. ಇದು ಕನಿಷ್ಠ 5 ಸಾವಿರ ಕೋಟಿ ಮೊತ್ತದ ಹಗರಣ ಎಂದು ವಿವರಿಸಿದರು.
ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ವಿಧಾನಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಎರಡೂ ಪಕ್ಷಗಳ ಮುಖಂಡರಾದ ಭೋಜೇಗೌಡ, ಬೈರತಿ ಬಸವರಾಜ್, ಅನ್ನದಾನಿ, ಅರವಿಂದ ಬೆಲ್ಲದ, ಕುಡಚಿ ರಾಜೀವ್, ಕೃಷ್ಣಪ್ಪ, ಸಿಮೆಂಟ್ ಮಂಜು, ನಾಡಗೌಡ, ಎಸ್.ಆರ್.ವಿಶ್ವನಾಥ್, ಆನಂದಸ್ವಾಮಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಸಂಸದರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.