ಬೆಂಗಳೂರು, ಆ.05(DaijiworldNews/AK): ಹೆಚ್.ಡಿ ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿ ಜೊತೆ, ಆಮೇಲೆ ಕಾಂಗ್ರೆಸ್ ಜೊತೆ ಸೇರಿಕೊಂಡು ಸರ್ಕಾರ ರಚಿಸಿ, ಸಿಎಂ ಹುದ್ದೆ ಅಲಂಕರಿಸಿದ್ದರು. ಈಗ ಪುನಃ ಬಿಜೆಪಿ ಜೊತೆ ಹೋಗಿದ್ದಾರೆ. ಅವರದ್ದು ಅವಕಾಶವಾದಿ ಮೈತ್ರಿ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಗುಡುಗಿದ್ದಾರೆ.
ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹೆಚ್ಡಿಕೆ ತಮ್ಮ ಸರ್ಕಾರವನ್ನೇ ಉಳಿಸಿಕೊಳ್ಳಲಿಲ್ಲ. ಈಗ ನಮ್ಮ ಸರ್ಕಾರ ಉರುಳಿಸುವ ಮಾತುಗಳನ್ನು ಆಡುತ್ತಿದ್ದಾರೆ ಎಂದು ಹೆಚ್ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕುಮಾರಸ್ವಾಮಿ ಮೊದಲು ಪಾದಯಾತ್ರೆಗೆ ತಮ್ಮ ನೈತಿಕ ಬೆಂಬಲವೂ ಇಲ್ಲ ಎಂದಿದ್ದರು. ಆಮೇಲೆ ಯಾರದೋ ಒತ್ತಡಕ್ಕೆ ಮಣಿದು ಕಾಟಾಚಾರಕ್ಕೆ ಪಾದಯಾತ್ರೆಗೆ ಹೋಗಿದ್ದಾರೆ ಎಂದು ಟೀಕಿಸಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಯಾವ ತಪ್ಪೂ ಇಲ್ಲ. ಸ್ವತಃ ಮುಡಾ ತಪ್ಪು ಮಾಡಿ, ಅದನ್ನು ಒಪ್ಪಿಕೊಂಡಿದೆ. ನಿಯಮಗಳಂತೆಯೇ ಸಿಎಂ ಪತ್ನಿಗೆ ಬದಲಿ ನಿವೇಶನಗಳನ್ನು ಅದು ಕೊಟ್ಟಿದೆ. ಇದರಲ್ಲಿ ಸಿದ್ದರಾಮಯ್ಯ ಅವರ ತಪ್ಪೇನಿದೆ ಎಂದು ಅವರು ಪ್ರಶ್ನಿಸಿದರು.