ಇಟಾನಗರ್, ಮೇ21(Daijiworld News/SS): ಅರುಣಾಚಲ ಪ್ರದೇಶದ ಬೋಗಾಪನಿ ಎಂಬಲ್ಲಿ ನಡೆದ ಉಗ್ರರ ಗುಂಡಿನ ದಾಳಿಗೆ ಸ್ಥಳೀಯ ಎನ್ಪಿಪಿ ಶಾಸಕ ತಿರಾಂಗ್ ಅಬೋಹ್ ಸೇರಿದಂತೆ ಏಳು ಜನರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಅರುಣಾಚಲ ಪ್ರದೇಶದ ಬೋಗಾಪನಿ ಎಂಬಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ತಿರಾಂಗ್ ಅಬೋಹ್ ಕೋನ್ಸಾ ದಕ್ಷಿಣ ಕ್ಷೇತ್ರದಿಂದ ಎನ್ಪಿಪಿ ಪಕ್ಷದ ಶಾಸಕರಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದ ಸ್ಪರ್ಧಿಸಿದ್ದರು. ಫಲಿತಾಂಶಕ್ಕೆ ಎರಡು ದಿನ ಬಾಕಿ ಇರುವಾಗಲೇ ತಿರಾಂಗ್ ಅಬೋಹ್ ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ.
ಬೋಗಾಪನಿ ಎಂಬಲ್ಲಿ ಶಾಸಕರ ಕಾರನ್ನು ತಡೆದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಸ್ಥಳದಲ್ಲಿಯೇ ತಿರಾಂಗ್ ಅಬೋಹ್ ಸೇರಿದಂತೆ 7 ಜನರು ಮೃತಪಟ್ಟಿದ್ದಾರೆ.
ನ್ಯಾಷನಲ್ ಸೋಷಿಯಲಿಸ್ಟ್ ಕೌನ್ಸಿಲ್ ಆಫ್ ನಾಗಲ್ಯಾಂಡ್ (ಎನ್ಎಸ್ಸಿಎನ್) ಸಂಘನೆಯ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದೆ.