ಬೆಂಗಳೂರು, ಆ.05(DaijiworldNews/AA): ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಕರೆತಂದು ರಾಮೇಶ್ವರಂ ಕೆಫೆಯಲ್ಲಿ ಎನ್ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ.
ಆರೋಪಿ ಮುಸಾವಿರ್ನನ್ನು ಕೆಫೆಗೆ ಕರೆತಂದು ಎನ್ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸುತ್ತಿದ್ದಾರೆ. ಈ ಹಿನ್ನೆಲೆ ರಾಮೇಶ್ವರಂ ಕೆಫೆ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತೆಗಾಗಿ 50ಕ್ಕೂ ಅಧಿಕ ಪೊಲೀಸರ ನಿಯೋಜಿಸಲಾಗಿದೆ. ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡು ಐದು ತಿಂಗಳು ಕಳೆದ ಬಳಿಕ, ಇದೀಗ ಆರೋಪಿಯನ್ನು ಸ್ಥಳಕ್ಕೆ ಕರೆತಂದು ಮಹಜರು ನಡೆಸಲಾಗುತ್ತಿದೆ.
ಎನ್ಐಎ ಅಧಿಕಾರಿಗಳು ಘಟನಾ ಸ್ಥಳದಲ್ಲಿ 2-3 ಬಾರಿ ದೃಶ್ಯವನ್ನು ಮರು ಸೃಷ್ಟಿಸಿದ್ದಾರೆ. ಆರೋಪಿ ಮುಸಾವಿರ್, ೩ ಬಾರಿ ನಡೆದುಕೊಂಡು ಬಂದು ಯಾವ ರೀತಿ ಕೃತ್ಯ ಎಸಗಲಾಗಿತ್ತು ಎಂದು ತೋರಿಸಿರುತ್ತಾನೆ. ಕ್ಯಾಪ್, ಕನ್ನಡಕ, ಬ್ಯಾಗ್ ಹಾಕಿ ನಡೆದುಕೊಂಡು ಬಂದು ಯಾವ ರೀತಿಯಾಗಿ ಕೃತ್ಯ ಎಸಗಿದ್ದ ಎಂಬ ವಿವರಣೆಯನ್ನು ಅಧಿಕಾರಿಗಳಿಗೆ ನೀಡಿರುತ್ತಾನೆ.
ಆರೋಪಿಯು ತಾನು ಕೆಫೆಗೆ ಬಂದಿದ್ದ ರೀತಿ, ಬಾಂಬ್ ಇಟ್ಟಿದ್ದ ಸ್ಥಳ, ಕುಳಿತಿದ್ದ ಸ್ಥಳ ಎಲ್ಲವನ್ನು ಅಧಿಕಾರಿಗಳಿಗೆ ತೋರಿಸಿದ್ದಾನೆ. ಈ ಎಲ್ಲವನ್ನು ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡ್ತಿದ್ದಾರೆ.