ಬೆಂಗಳೂರು, ಆ.05(DaijiworldNews/AA): ಮೊದಲು ಈ ಹಿಂದೆ ನೀವು ಮಾಡಿರುವ ಹಗರಣಗಳಿಗೆ ಉತ್ತರ ಕೊಡಿ ಅಂತ ಕೇಳುತ್ತಿದ್ದೇವೆ. ನಿನ್ನ ಸಹೋದರನ ಆಸ್ತಿ ಲೆಕ್ಕ ಕೊಡು. ನಿನ್ನ ಅಧಿಕಾರ ಹೇಗೆ ದುರುಪಯೋಗ ಆಯ್ತು? ಅದೆಲ್ಲ ಮೊದಲು ಲೆಕ್ಕ ಕೊಡು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಹೆಚ್ಡಿಕೆ ಅವರು ಭಾನುವಾರ ಮೈಸೂರು ಚಲೊ ಪಾದಯಾತ್ರೆಯಲ್ಲಿ ಡಿಕೆಶಿ ವಿರುದ್ಧ ಆರೋಪ ಮಾಡಿದ್ದರು. ಇದಕ್ಕೆ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದು, ಕೇಂದ್ರ ಸರ್ಕಾರದಿಂದ ಏಕೆ ಹಣ ಬಿಡುಗಡೆ ಮಾಡಿಸಲಿಲ್ಲ. ಹಿಂದೆ ನೀವು ಏನೇನು ಮಾಡಿದ್ರಿ ಎಂದು ಜನರಿಗೆ ತಿಳಿಸಲು ಈ ಜನಾಂದೋಲನ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಗುಡುಗಿದ್ದಾರೆ.
ಡಿಕೆ ಶಿವಕುಮಾರ್ ಮತ್ತು ಹೆಚ್ಡಿ ಕುಮಾರಸ್ವಾಮಿ ನಡುವೆ ಆರೋಪ, ಪ್ರತ್ಯಾರೋಪ ಜೋರಾಗಿ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ. ಅವರ ಆಸ್ತಿ ಲೆಕ್ಕ ಕೊಡಲಿ ಎಂದು ಆರೋಪಿಸಿದ್ದರು.