ಮಂಡ್ಯ, ಆ.05(DaijiworldNews/AK): ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ಕೊಡಲು ಎರಡು ದಿನಗಳ ಕಾಲ ಕಾಂಗ್ರೆಸ್ ಜನಾಂದೋಲನ ಆರಂಭಿಸಿದೆ. ಮದ್ದೂರು ತಾಲೂಕು ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಜನಾಂದೋಲನ ಸಮಾವೇಶ ಮೊದಲ ದಿನ ಕಾಂಗ್ರೆಸ್ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಬಿಜೆಪಿ - ಜೆಡಿಎಸ್ ಮೈತ್ರಿಕೂಟದ ವಿರುದ್ಧ ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ.
ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭಾಷಣ ಮಾಡುತ್ತಾ, ಸಿದ್ದರಾಮಯ್ಯ ಏನು ತಪ್ಪು ಮಾಡಿದ್ದಾರೆ? ಸಿದ್ದರಾಮಯ್ಯ ಕಳ್ಳತನ ಮಾಡಿದ್ದಾರ? ಸರ್ಕಾರಿ ಜಮೀನು ಒಡೆದಿದ್ದಾರ? ಸರ್ಕಾರ ಪಡೆದು ಬೇರೆ ಜಾಗ ಕೊಟ್ಟಿದೆ ತಪ್ಪೇನಿದೆ? ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಸರ್ಕಾರದಲ್ಲಾದ ಹಗರಣಗಳ ಬಗ್ಗೆ ಮೊದಲು ಉತ್ತರ ಕೊಡಿ. ಆನಂತರ ಪಾದಯಾತ್ರೆ ಮಾಡಿ. ಸಿದ್ದರಾಮಯ್ಯರನ್ನ ಮುಟ್ಟಲು ನಿಮ್ಮ ಹಣೆಯಲ್ಲೂ ಬರೆದಿಲ್ಲ. ಹಿಂದುಳಿದ ವರ್ಗದ ನಾಯಕ 2ನೇ ಬಾರಿಗೆ ಸಿಎಂ ಆಗಿದ್ದು ನಿಮಗೆ ಸಹಿಸಲು ಆಗ್ತಿಲ್ಲ. ಸರ್ಕಾರ ಮಾಡುವ ಅವಕಾಶ ನಮಗೆ ಸಿಗಲಿಲ್ಲ ಎಂದು ಸಾಯುತ್ತಿದ್ದಾರೆ ಎಂದು ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ