ಬೆಂಗಳೂರು, ಆ.05(DaijiworldNews/AK): ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್ಗೆ ಸಂಬಂಧಿಸಿದಂತೆ ಚಾರ್ಜ್ಶೀಟ್ ಸಲ್ಲಿಸಿರುವ ಬೆನ್ನಲ್ಲೇ ವಿಶೇಷ ತನಿಖಾ ತಂಡ ತನ್ನ ಭೇಟೆಯನ್ನು ಮುಂದುವರಿಸಿದೆ. ಸೋಮವಾರ ಮತ್ತೆ 7.5 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ.
ಫಸ್ಟ್ ಫಿನಾನ್ಸ್ ಬ್ಯಾಂಕ್ಸ್ನ ಅಧ್ಯಕ್ಷ ಸತ್ಯನಾರಾಯಣ ಇಟ್ಕಾರಿ ಬಳಿ ಹಣವನ್ನು ವಶಕ್ಕೆ ಪಡೆದಿದ್ದಾರೆ. ಆರ್ಬಿಎಲ್ ಬ್ಯಾಂಕ್ನಲ್ಲಿದ್ದ ಇಟ್ಕಾರಿ ಖಾತೆಯಿಂದಲೇ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಮೂಲಕ ಈವರೆಗೆ ಎಸ್ಐಟಿ ಒಟ್ಟು 57 ಕೋಟಿ ರೂ.ಗಳನ್ನು ಜಪ್ತಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಮಾಜಿ ಸಚಿವ ಬಿ.ಎನ್ ನಾಗೇಂದ್ರ ಅವರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ. ಸೋಮವಾರ (ಆ.5) ನ್ಯಾಯಾಂಗ ಬಂಧನ ಅಂತ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಗೇಂದ್ರ ಅವರನ್ನು ಹಾಜರುಪಡಿಸಲಾಗಿತ್ತು. ನಾಗೇಂದ್ರ ಅವರು ಜಾಮೀನಿಗೆ ಅರ್ಜಿ ಹಾಕದೇ ಇರುವ ಕಾರಣ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಯಿತು. ಆಗಸ್ಟ್ 14ರ ವರೆಗೂ ಇಬ್ಬರ ನ್ಯಾಯಾಂಗ ಬಂಧನ ವಿಸ್ತರಣೆ ಆಗಿದೆ.
ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ ಸುಮಾರು 3,072 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.