ತಿರುವನಂತಪುರಂ, ಆ.06(DaijiworldNews/AA): ವಯನಾಡು ಭೂಕುಸಿತ ಸಂಭವಿಸಿ ಇಂದಿಗೆ 1 ವಾರ ಕಳೆದಿದ್ದರೂ ಇದುವರೆಗೂ ಮೃತದೇಹ ಪತ್ತೆಯಾಗುತ್ತಲೇ ಇವೆ. ಈ ದುರಂತದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 402ಕ್ಕೆ ಏರಿಕೆಯಾಗಿದೆ.
ಇನ್ನು ಈ ಭೀಕರ ದುರಂತದಲ್ಲಿ ನೂರಾರು ಮಂದಿ ಪತ್ತೆಯಾಗಬೇಕಿದೆ. ಈ ಹಿನ್ನೆಲೆ ಕಾರ್ಯಾಚರಣೆ ಮುಂದುವರೆದಿದೆ. ಈ ನಡುವೆ ಸಿಕ್ಕ ಕೆಲ ಮೃತದೇಹಗಳ ಗುರುತು ಪತ್ತೆಯಾಗಿಲ್ಲ. ಇದೀಗ ಗುರುತು ಸಿಗದ ಮೃತದೇಹಗಳಿಗೆ ಸರ್ವಧರ್ಮ ಪ್ರಾರ್ಥನೆ ಮೂಲಕ ಸಾಮೂಹಿಕವಾಗಿ ಅಂತಿಮ ವಿಧಿ ವಿಧಾನ ನಡೆಸಲಾಗುತ್ತಿದೆ.
ಪುತ್ತುಮಲ ಎಂಬಲ್ಲಿ ಸೋಮವಾರ 29 ಮೃತದೇಹ ಮತ್ತು 154 ದೇಹದ ಭಾಗಗಳ ಅಂತಿಮ ಕ್ರಿಯೆಯನ್ನು ಹಿಂದೂ, ಕ್ರಿಶ್ಚಿಯನ್ ಮತ್ತು ಮುಸ್ಲಿಂ ಧರ್ಮದ ಪ್ರಾರ್ಥನೆ ಬಳಿಕ ನೆರವೇರಿಸಲಾಯಿತು. ಅವಶೇಷಗಳಡಿ ದೊರೆತ ಶರೀರದ ಭಾಗಗಳನ್ನೂ ಮೃತದೇಹವೆಂದು ಪರಿಗಣಿಸಿ ಅಂತಿಮ ವಿಧಿ ವಿಧಾನ ನಡೆಸಲಾಯಿತು.