ಭೋಪಾಲ್, ಮೇ21(Daijiworld News/SS): ಭೋಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ಅವರ ವಿರುದ್ಧದ ಸುಮಾರು 12 ವರ್ಷಗಳ ಹಿಂದಿನ ಕೊಲೆ ಪ್ರಕರಣವೊಂದರ ಮರು ತನಿಖೆಗೆ ನಡೆಸುವ ಬಗ್ಗೆ ಮಧ್ಯ ಪ್ರದೇಶ ಸರ್ಕಾರ ಚಿಂತನೆ ನಡೆಸುತ್ತಿದೆ.

ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ, ಪ್ರಗ್ಯಾ ಸಿಂಗ್ ಭೋಪಾಲ್’ನಿಂದ ಗೆಲುವು ಸಾಧಿಸುತ್ತಾರೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಹೇಳಿದ ಬೆನ್ನಲ್ಲೇ, ಆರ್ ಎಸ್ಎಸ್ ಪ್ರಚಾರಕ ಸುನಿಲ್ ಜೋಶಿ ಕೊಲೆ ಪ್ರಕರಣದ ಮರು ತನಿಖೆ ನಡೆಸುವ ಬಗ್ಗೆ ಕಾನೂನು ಸಲಹೆ ಪಡೆಯುವುದಾಗಿ ಮಧ್ಯ ಪ್ರದೇಶ ಕಾನೂನು ಸಚಿವ ಪಿಸಿ ಶರ್ಮಾ ಹೇಳಿದ್ದಾರೆ.
2007ರ ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿದ್ದ ಸುನಿಲ್ ಜೋಶಿ ಅವರನ್ನು ದೆವಾಸ್ ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜೋಶಿ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪ್ರಗ್ಯಾ ಸಿಂಗ್ ಅವರನ್ನು ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಕೋರ್ಟ್ ಖುಲಾಸೆಗೊಳಿಸಿತ್ತು.
ಇದೀಗ ಪ್ರಕರಣಕ್ಕೆ ಮರು ಜೀವ ನೀಡಲು ಮುಂದಾಗಿರುವ ಮಧ್ಯ ಪ್ರದೇಶ ಸರ್ಕಾರ, ಉಚ್ಛ ನ್ಯಾಯಾಲಯದ ಮೊರೆ ಹೋಗುವುದಾಗಿ ಹೇಳಿದೆ.