ಮೈಸೂರು, ಆ.08(DaijiworldNews/AK):ತಮ್ಮ 40 ವರ್ಷಗಳ ಸಾರ್ವಜನಿಕ ಜೀವನದಲ್ಲಿ ಒಂದೇ ಒಂದು ಕಳಂಕ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ. ಹಾಗಿದ್ದರೆ ಮೂಡ ಹಗರಣ ಕಳಂಕ ಅಲ್ಲವೇ ಎಂದು ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.
ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಲೂಟಿ ನಿಮ್ಮ ಸರಕಾರಕ್ಕೆ ಕಪ್ಪು ಚುಕ್ಕಿ ಅಲ್ಲವೇ? ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಕಾಯಿದೆ ಉಲ್ಲಂಘಿಸಿ, ನಿಯಮ ಉಲ್ಲಂಘನೆ ಮಾಡಿ ಒಂದೇ ಕಂಪೆನಿಗೆ 600 ಕೋಟಿಯ ಟೆಂಡರ್ ಕೊಟ್ಟಿರುವುದು ಕಪ್ಪುಚುಕ್ಕಿ ಅಲ್ಲವೇ? ಎಂಬ ಪ್ರಶ್ನೆಯನ್ನು ಮುಂದಿಟ್ಟರು.
ಪೊಲೀಸ್, ಕಂದಾಯ ಇಲಾಖೆ ಸೇರಿ ಎಲ್ಲ ಇಲಾಖೆಗಳಲ್ಲಿ ಪ್ರತಿ ಹುದ್ದೆಗೆ ರೇಟ್ ಕಾರ್ಡ್ ನಿಗದಿ ಮಾಡಿರುವುದು, ಸಬ್ ರಿಜಿಸ್ಟಾರ್ಗಳ ಹುದ್ದೆಯ ನೇಮಕಾತಿಗೆ ಬಹಿರಂಗ ಹರಾಜು, ಅಬಕಾರಿ ಇಲಾಖೆಯಲ್ಲಿ ಉನ್ನತ ಹುದ್ದೆಗೆ ದರ ನಿಗದಿ ಮಾಡಿದ್ದಾರೆ. ಸಾರಿಗೆ ಇಲಾಖೆಯಲ್ಲಿ ಆರ್ಟಿಒಗಳ ಬಹಿರಂಗ ಹರಾಜು ನಡೆಯುತ್ತಿದೆ. ಇದು ತಮ್ಮ ಆಡಳಿತದ ಕಳಂಕವಲ್ಲವೇ ಎಂದು ಕೇಳಿದರು.
ಬೆಂಗಳೂರಿನಲ್ಲಿ ಪ್ರತಿ ತಿಂಗಳು ಸಂಗ್ರಹವಾಗುವ 500ರಿಂದ 600 ಕೋಟಿ ಲಂಚ ಎಲ್ಲಿ ಹೋಗುತ್ತಿದೆ? ಚೇಂಜ್ ಆಫ್ ಲ್ಯಾಂಡ್ ಯೂಸ್ಗೆ ಪ್ರತಿ ಎಕರೆಗೆ 25 ಲಕ್ಷ ಲಂಚ ಕೊಡಬೇಕಿದೆ. ಅದೆಲ್ಲಿ ಹೋಗುತ್ತಿದೆ? ಇದೆಲ್ಲವೂ ಆಡಳಿತಕ್ಕೆ ಕಳಂಕವಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮುಖ್ಯಮಂತ್ರಿಗಳೇ, ಸಾರ್ವಜನಿಕ ಬದುಕು ಸ್ವಚ್ಛವಾಗಿದ್ದರೆ ಮಾತ್ರ ಕಳಂಕರಹಿತ ಆಡಳಿತ ಎನ್ನಬಹುದು. ನಿಮ್ಮ ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಎಲ್ಲಿದೆ? ಈ ಎಲ್ಲ ಭ್ರಷ್ಟಾಚಾರ ಏನನ್ನು ಸೂಚಿಸುತ್ತದೆ ಎಂದು ಅವರು ಕೇಳಿದರು.ಇದೇ 3ರಂದು ಪ್ರಾರಂಭವಾದ ಬಿಜೆಪಿ- ಜೆಡಿಎಸ್ ಜಂಟಿ ಪಾದಯಾತ್ರೆಯು ಈಗ ಜನಾಂದೋಲನವಾಗಿ ರೂಪುಗೊಂಡಿದೆ. ಆಡಳಿತ ಪಕ್ಷ ಪಾದಯಾತ್ರೆಗೆ ಲಭಿಸುತ್ತಿರುವ ಜನಬೆಂಬಲ ನೋಡಿ ಮುಖ್ಯಮಂತ್ರಿ, ಸಚಿವಸಂಪುಟ ಮತ್ತು ಕಾಂಗ್ರೆಸ್ ಹೈಕಮಾಂಡ್ ಗಾಬರಿಗೊಂಡಿದೆ. ಅವರು ಭಯಭೀತರಾಗಿ ಬೆದರಿಕೆ ತಂತ್ರವನ್ನು ಅನುಸರಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.