ನವದೆಹಲಿ, ಆ 8(DaijiworldNews/MS): ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದ ಒಟ್ಟು 62,830 ಸ್ಥಿರಾಸ್ತಿಗಳನ್ನು ದಾಖಲೀಕರಣಗೊಳಿಸಲಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಹೇಳಿದ್ದಾರೆ.
ಸಂಸತ್ ನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು, ದೇಶದಲ್ಲಿ ವಕ್ಫ್ ಮಂಡಳಿ ಹೊಂದಿರುವ ಒಟ್ಟು ಆಸ್ತಿಗಳ ವಿವರಗಳಿಗೆ ಸಂಬಂಧಿಸಿದಂತೆ ಕೇಳಿರುವ ಪ್ರಶ್ನೆಗೆ ಸಚಿವರು ಲಿಖಿತ ರೂಪದ ಈ ಉತ್ತರ ನೀಡಿದ್ದಾರೆ.
ಕರ್ನಾಟಕ ಸೇರಿದಂತೆ ದೇಶದಲ್ಲಿ ವಕ್ಫ್ ಮಂಡಳಿ ಸ್ವಾಧೀನದಲ್ಲಿರುವ ಆಸ್ತಿಗಳ ದಾಖಲೆಗಳು ಇವೆಯೇ? ಈ ಬಗ್ಗೆ ರಾಜ್ಯವಾರು ವಕ್ಫ್ ಆಸ್ತಿಗಳ ದಾಖಲಾತಿ ಸರ್ಕಾರದ ಬಳಿ ಇದೆಯೇ? ನಿರ್ದಿಷ್ಠವಾಗಿ ದಕ್ಷಿಣ ಕನ್ನಡದಲ್ಲಿರುವ ವಕ್ಫ್ ಆಸ್ತಿ ಹಾಗೂ ಅವುಗಳ ಭೂಮಾಲೀಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಮಾಹಿತಿ ಲಭ್ಯವಿದೆಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಚೌಟ ಅವರು ಸಚಿವರಿಗೆ ಕೇಳಿದ್ದರು.
ಇದಕ್ಕೆ ಲಿಖಿತ ಉತ್ತರಿಸಿರುವ ಸಚಿವ ಕಿರಣ್ ರಿಜಿಜು ಅವರು, ಭಾರತದ ವಕ್ಫ್ ಆಸ್ತಿ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ( WAMASI) 2010ರಲ್ಲಿ ಪ್ರಾರಂಭವಾಗಿದೆ. ಪ್ರತಿ ತಿಂಗಳು ಈ ಪೋರ್ಟಲ್ನಲ್ಲಿ ದೇಶದೆಲ್ಲೆಡೆಯಿರುವ ವಕ್ಫ್ ಆಸ್ತಿಗಳ ದಾಖಲೀಕರಣ ಮಾಡಲಾಗುತ್ತಿದೆ. ಇಲ್ಲಿವರೆಗೆ ದೇಶದಲ್ಲಿ ಒಟ್ಟು 8,72,320 ಸ್ಥಿರಾಸ್ತಿಗಳು ದಾಖಲೀಕರಣಗೊಂಡಿವೆ. ಈ ಪೈಕಿ ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಒಟ್ಟು 62,830 ವಕ್ಫ್ ಸ್ಥಿರಾಸ್ತಿಗಳು ದಾಖಲೀಕರಣಗೊಂಡಿವೆ. ಕರ್ನಾಟಕದ ಒಟ್ಟು 32,844 ಆಸ್ತಿಗಳು WAMASI ಪೋರ್ಟಲ್ನಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ದೇಶದಲ್ಲಿ ಅತಿಹೆಚ್ಚು ಅಂದರೆ 2,17,161 (ಸುನ್ನಿ) ಹಾಗೂ 15,386(ಶಿಯಾ)ದ ವಕ್ಫ್ ಸ್ಥಿರಾಸ್ತಿಗಳು ಉತ್ತರ ಪ್ರದೇಶದಲ್ಲಿ ದಾಖಲೀಕರಣಗೊಂಡಿವೆ. ಹಾಗೆಯೇ ಪಶ್ಚಿಮ ಬಂಗಾಲದಲ್ಲಿ 80,480, ಪಂಜಾಬ್ 75,955, ತಮಿಳುನಾಡಿನಲ್ಲಿ 66,092, ಕೇರಳದಲ್ಲಿ 53,278 ವಕ್ಫ್ ಮಂಡಳಿಯ ಸ್ಥಿರಾಸ್ತಿಗಳ ದಾಖಲೀಕರಣಗೊಂಡಿವೆ. ಕೇಂದ್ರಾಡಳಿತ ಪ್ರದೇಶ ಹೊರತುಪಡಿಸಿದಂತೆ ದೆಹಲಿ, ಮೇಘಾಲಯ, ಮಣಿಪುರ, ಮುಂತಾದ ರಾಜ್ಯಗಳಲ್ಲಿ ಅತಿಕಡಿಮೆ ಸಂಖ್ಯೆಯ ವಕ್ಫ್ ಆಸ್ತಿ ದಾಖಲೀಕರಣಗೊಂಡಿರುವುದಾಗಿ ಸಚಿವರು ಅಂಕಿ-ಅಂಶಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಮುಸ್ಲಿಂ ಕಾನೂನಿಗೆ ಅನುಗುಣವಾಗಿ ದಾನ(ಔಕಾಫ್) ಮಾಡಲಾದ ಆಸ್ತಿಗಳನ್ನು ನಿಯಂತ್ರಿಸಲು 1995ರಲ್ಲಿ ವಕ್ಫ್ ಕಾಯ್ದೆ ಜಾರಿಗೊಳಿಸಲಾಗಿದೆ. ಮುಸ್ಲಿಂ ಕಾನೂನು ಪ್ರಕಾರ ಪುಣ್ಯದ, ಧಾರ್ಮಿಕ ಅಥವಾ ದತ್ತಿ ಎಂದು ಗುರುತಿಸಲ್ಪಟ್ಟಿರುವ ಯಾವುದೇ ಉದ್ದೇಶಕ್ಕಾಗಿ ವ್ಯಕ್ತಿಯು ದಾನ ಮಾಡಿದ ಆಸ್ತಿಯನ್ನು ಈ ವಕ್ಫ್ ಕಾಯ್ದೆಯಡಿ ನಿಯಂತ್ರಿಸಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಇಂದು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಮಂಡನೆ:
ಈ ನಡುವೆ, ಕೇಂದ್ರ ಸರ್ಕಾರ 1995ರ ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಕ್ಫ್ ಮಂಡಳಿಯ ಆಸ್ತಿಗಳಿಗೆ ನಿಯಂತ್ರಣ ಹೇರುವ ಅಂಕುಶ ಹಾಕಲು ನಿರ್ಧರಿಸಿದೆ. ಅದರಂತೆ ವಕ್ಫ್ ಕಾಯ್ದೆಯಡಿ ವಕ್ಫ್ ಮಂಡಳಿಗೆ ನೀಡಲಾಗಿರುವ ಅಧಿಕಾರ ಕಡಿತಗೊಳಿಸುವುದಕ್ಕೆ ಸಂಬಂಧಿಸಿದ ವಕ್ಫ್ ತಿದ್ದುಪಡಿ ಮಸೂದೆ ಕೂಡ ಗುರುವಾರ ಸಂಸತ್ತಿನಲ್ಲಿ ಮಂಡನೆಯಾಗಲಿದೆ. ಈ ಹಿನ್ನಲೆಯಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಉಲ್ಲೇಖಿಸಿರುವ ಈ ಪ್ರಶ್ನೆ ಹಾಗೂ ಸಚಿವರು ನೀಡಿರುವ ಉತ್ತರ ಮಹತ್ವ ಪಡೆದುಕೊಂಡಿದೆ.