ಬೆಂಗಳೂರು,ಮೇ.22(DaijiworldNews/AZM):: ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬುವುದನ್ನು ಮಹಾಘಟಬಂಧನ್ ಘೋಷಿಸಿತ್ತದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕಳೆದ ಕೆಲ ದಿನಗಳಿಂದ ಕೇಂದ್ರದದಲ್ಲಿ ಬಿಜೆಪಿಯೇತರ ಸರಕಾರ ನಡೆಸಬೇಕೆಂದು ಪಣತೊಟ್ಟು ಓಡಾಡುತ್ತಿದ್ದು,ಈ ಹಿನ್ನಲೆ ಬೆಂಗಳೂರಿಗೆ ಆಗಮಿಸಿದ್ದ ಅವರು ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಚರ್ಚೆಯ ವೇಳೆ ದೇವೇಗೌಡ ಹಾಗೂ ಚಂದ್ರಬಾಬು ನಾಯ್ಡು ಪ್ರಸ್ತುತ ರಾಷ್ಟ್ರ ರಾಜಕೀಯ ಮಹಾಘಟಬಂಧನ್ ಸಾಧ್ಯತೆ? ಹಾಗೂ ದೇಶದಾದ್ಯಂತ ಭುಗಿಲೆದ್ದಿರುವ ಇವಿಎಂ ತಿರುಚುವಿಕೆ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಚರ್ಚೆಯ ಬಳಿಕ ಈ ಕುರಿತು ಮಾತನಾಡಿದ ದೇವೇಗೌಡ, “2009ರಿಂದ ಇವಿಎಂ ಬಗ್ಗೆ ಎಲ್ಲಾ ಪಕ್ಷಗಳು ತಮ್ಮ ತಕರಾರು ಮುಂದಿಡುತ್ತಿವೆ. ಅಂದಿನಿಂದಲೂ ಜೆ.ಡಿ.ಎಸ್ ಪಕ್ಷವೂ ಸಹ ಕೇಂದ್ರ ಚುನಾವಣಾ ಆಯೋಗಕ್ಕೆ ಇವಿಎಂಗಳ ಕುರಿತು ಪತ್ರ ಬರೆಯುತ್ತಿದೆ. ಆದರೆ, ಚುನಾವಣಾ ಆಯೋಗ ಯಾವುದೇ ಸೂಕ್ತ ಕ್ರಮ ಜರುಗಿಸಿಲ್ಲ" ಎಂದು ಆರೋಪಿಸಿದರು. ಅಲ್ಲದೆ ಈ ಕುರಿತು ರಾಷ್ಟ್ರಪತಿಗೂ ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.
ಇನ್ನೂ ಮಹಾಘಟಬಂಧನ್ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯೇ? ಎಂಬ ಪತ್ರಕರ್ತರ ಪ್ರಶ್ನೆಗೆ ಚಂದ್ರಬಾಬು ನಾಯ್ಡು ಮುಗುಳ್ನಕ್ಕು ಸುಮ್ಮನಾದರೆ, ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಗೌಡ, “ಚುನಾವಣೆ ಫಲಿತಾಂಶದ ನಂತರ ಮೈತ್ರಿ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಎಂದು ನಿಶ್ಚಯಿಸಲಾಗುವುದು. ಈ ಕುರಿತು ನಮ್ಮ ಮುಂದಿನ ನಡೆ ಏನು? ಎಂಬುದರ ಕುರಿತು ಚರ್ಚೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.