ಬೆಂಗಳೂರು, ಆ.10(DaijiworldNews/AA): ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಕೆಳ ಹಂತದಿಂದ ಇಲಾಖೆಯಲ್ಲಿ ಸುಧಾರಣೆ ತರಬೇಕು ಅಂತ ಕಷ್ಟ ಪಡುತ್ತಿದ್ದೇನೆ. ಪೌಷ್ಟಿಕ ಆಹಾರ, ಗುಣಮಟ್ಟದ ಶಿಕ್ಷಣ ಅಂಗನವಾಡಿಯ ಮೂಲ ಉದ್ದೇಶ. ಆದರೆ, ಬಡಮಕ್ಕಳಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚಿಸಿದ್ದಾರೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಹಾಗೂ ಸಹಾಯಕಿ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನ ಈಗಾಗಲೇ ಕೆಲಸದಿಂದ ಸಸ್ಪೆಂಡ್ ಮಾಡಲಾಗಿದ್ದು, ಇಂತಹ ತಪ್ಪನ್ನು ಮಾಡಿದ್ರೆ ಕಡ್ಡಾಯವಾಗಿ ಕೆಲಸದಿಂದ ನಿವೃತ್ತಿಗೊಳಿಸುತ್ತೇನೆ. ಬೇರೆಯವರಿಗೆ ಈ ಪ್ರಕರಣ ಪಾಠ ಆಗಬೇಕು. ಕೊಪ್ಪಳದ ಶಿಶು ಅಭಿವೃದ್ಧಿಕಾರಿ (ಸಿಡಿಪಿಒ) ಅಮಾನತು ಮಾಡಿ ಡಿಡಿಗೆ ನೋಟೀಸ್ ನೀಡಲು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇನೆ ಎಂದರು.
ಒಂದು ಮಗುವಿಗೆ ಊಟಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ 8 ರೂ. ಭರಿಸಲಾಗುತ್ತಿದೆ. ಕಳೆದ 9 ವರ್ಷಗಳಿಂದ ಯೂನಿಟ್ ದರ ಏರಿಕೆ ಮಾಡಿಲ್ಲ. ಬೇಳೆಗಳ ಬೆಲೆ ಬಹಳಷ್ಟು ಹೆಚ್ಚಳವಾಗಿದೆ. ಮೊಟ್ಟೆ, ಗುಣಮಟ್ಟದ ಕೆನೆ ಭರಿತ ಹಾಲು ಕೊಡುವುದು ಸಿಎಂ ಸಿದ್ದರಾಮಯ್ಯ ಸರ್ಕಾರದ ಯೋಜನೆ. ಮಕ್ಕಳಿಗೆ ಊಟ ಬಡಿಸುವ ವೇಳೆ ಕಡ್ಡಾಯವಾಗಿ ವೀಡಿಯೊ ಚಿತ್ರೀಕರಣ ಮಾಡಬೇಕು ಎಂದು ಆದೇಶಿಸಿದರು.
ಚಿತ್ರೀಕರಣದ ಬಳಿಕ ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ವಾಟ್ಸ್ ಆಪ್ ಗ್ರೂಪ್ಗಳ ಮೂಲಕ ಅಪ್ ಲೋಡ್ ಆಗಬೇಕು. ಇದೇ ರೀತಿಯ ಪ್ರಕರಣ ಕಳೆದ ಬಾರಿಯೂ ಕೇಳಿಬಂದಿದ್ದು, ನಂತರ ವೀಡಿಯೊ ಚಿತ್ರೀಕರಣ ಕಡ್ಡಾಯ ಮಾಡಿದ್ದೇವೆ. ಇದೀಗ ವೀಡಿಯೋ ಚಿತ್ರೀಕರಣ ಕಡ್ಡಾಯದಿಂದಲೇ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
ಇನ್ನು ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಅನ್ನೋ ಸ್ಥಿತಿ ಮಕ್ಕಳದ್ದಾಗಿದೆ. 69 ಸಾವಿರ ಅಂಗನವಾಡಿಗಳನ್ನು ಕರ್ನಾಟಕ ರಾಜ್ಯದಲ್ಲಿ ನಡೆಸುತ್ತಿದ್ದೇವೆ ಎಲ್ಲೋ ಒಂದು ಕಡೆ ಆದರೆ ಸಂಪೂರ್ಣ ಇಲಾಖೆಗೆ ಕಷ್ಟ ಆಗುತ್ತೆ. ನಿನ್ನೆ ರಾತ್ರಿಯೇ ಈ ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.