ನವದೆಹಲಿ, ಆ.10(DaijiworldNews/AA): ನಾಯಕರನ್ನು ಜೈಲಿಗೆ ಕಳುಹಿಸುವುದು, ನಾಗರಿಕರಿಗೆ ಕಿರುಕುಳ ನೀಡುವ ಸರ್ವಾಧಿಕಾರಿ ಧೋರಣೆಗಳ ವಿರುದ್ಧ ಪ್ರತಿಯೊಬ್ಬ ವ್ಯಕ್ತಿಯು ಹೋರಾಟ ನಡೆಸಬೇಕು ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ಅವರು ತಿಳಿಸಿದ್ದಾರೆ.
ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ 17 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ಅವರು, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಯಾವ ವ್ಯಕ್ತಿಗಳು ಅಥವಾ ಯಾವ ಶಕ್ತಿಯು ಸಂವಿಧಾನಕ್ಕಿಂತ ದೊಡ್ಡದ್ದಲ್ಲ ಎಂದು ಹೇಳಿರುವ ಅವರು, ಸರ್ವಾಧಿಕಾರ ಧೋರಣೆ ವಿರುದ್ಧ ಹೋರಾಟ ನಡೆಸಲು ಜನರಿಗೆ ಹಾಗೂ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.
ಅಬಕಾರಿ ನೀತಿ ಪ್ರಕರಣದಲ್ಲಿ ಸೆರೆ ವಾಸ ಅನುಭವಿಸುತ್ತಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ದೇಶದ ಪ್ರಾಮಾಣಿಕತೆಯ ಪ್ರತೀಕ. ಕೇಜ್ರಿವಾಲ್ ಅವರನ್ನು ಉದ್ದೇಶ ಪೂರ್ವಕವಾಗಿಯೇ ಜೈಲಿಗೆ ಕಳುಹಿಸಲಾಗಿದೆ. ವಿರೋಧ ಪಕ್ಷಗಳು ಒಂದಾದರೆ ಕೇವಲ 24 ಗಂಟೆಗಳಲ್ಲಿ ಅರವಿಂದ ಕೇಜ್ರಿವಾಲ್ ಹೊರಗೆ ಬರುತ್ತಾರೆ. ನಾವು ಕೇವಲ ರಥದ ಕುದುರೆಗಳು ಆದರೆ ನಮ್ಮ ನಿಜವಾದ 'ಸಾರಥಿ' ಜೈಲಿನಲ್ಲಿದ್ದಾರೆ. ಅವರು ಶೀಘ್ರದಲ್ಲೇ ಹೊರಬರುತ್ತಾರೆ ಎಂದರು.