ಗುನಾ, ಆ.11(DaijiworldNews/AA): ಖಾಸಗಿ ವಿಮಾನಯಾನ ಅಕಾಡೆಮಿಗೆ ಸೇರಿದ ತರಬೇತಿ ವಿಮಾನವು ಪತನಗೊಂಡು ಇಬ್ಬರು ಪೈಲೆಟ್ಗಳಿಗೆ ಗಾಯವಾದ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಏರ್ ಸ್ಟ್ರಿಪ್ ನಲ್ಲಿ ಇಂದು ನಡೆದಿದೆ.
ಎರಡು ಆಸನಗಳ ಸೆಸ್ನಾ 152 ವಿಮಾನ ಇಂದು ಮಧ್ಯಾಹ್ನ 1:30 ರ ಸುಮಾರಿಗೆ ಪತನಗೊಂಡಿದೆ. ಘಟನೆಗೆ ಎಂಜಿನ್ ವೈಫಲ್ಯ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ತಿಳಿದುಬಂದಿದೆ.
ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಗಾಯಗೊಂಡಿದ್ದು, ಪ್ರಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಪರೀಕ್ಷೆ ಮತ್ತು ನಿರ್ವಹಣೆಗಾಗಿ ಕೆಲ ದಿನಗಳ ಹಿಂದೆ ಈ ವಿಮಾನವನ್ನು ಇಲ್ಲಿಗೆ ತರಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.