ಬೆಂಗಳೂರು, ಆ. 12 (DaijiworldNews/AK): ಮುಖ್ಯಮಂತ್ರಿ ಬದಲಾಗುವ ಕುರಿತು ಕಾಂಗ್ರೆಸ್ನ ಯಾವ ನಾಯಕರೂ ಕೂಡ ಹೇಳಿಲ್ಲ. ಆದರೆ ಬಿಜೆಪಿ-ಜೆಡಿಎಸ್
ನಾಯಕರು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಆ ರೀತಿಯ ಚರ್ಚೆಗಳು ನಡೆದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಮುಖ್ಯಮಂತ್ರಿಯವರ ವಿರುದ್ಧ ಅಭಿಯೋಜನೆಗೆ ಅನುಮತಿ ನೀಡಬಾರದು. ಈ ಕುರಿತು ದಾಖಲಾಗಿರುವ ದೂರನ್ನು ತಿರಸ್ಕರಿಸಬೇಕು ಮತ್ತು ಶೋಕಾಸ್ ನೋಟಿಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಸಚಿವ ಸಂಪುಟ ಸಭೆ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಸಲಹೆ ನೀಡಿದೆ. ಅದರ ಹೊರತಾಗಿಯೂ ಅವರು ಮುಂದುವರಿದರೆ ನಮಗೂ ಕಾನೂನು ಹೋರಾಟ ಅನಿವಾರ್ಯವಾಗಲಿದೆ. ರಾಜ್ಯಪಾಲರು ಕಾನೂನಿನ ಪ್ರಕಾರ ನಡೆದುಕೊಳ್ಳುವ ನಿರೀಕ್ಷೆಯಿದೆ. ರಾಜ್ಯಪಾಲರು ಕಾನೂನು ಬಿಟ್ಟು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಅನಿಸುವುದಿಲ್ಲ
ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವು ಮಾಡಿಸಲು ಸರಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ ವಿಚಾರಣೆಯಲ್ಲಿ ರಾಜ್ಯ ಸರಕಾರದ ಪರವಾಗಿ ಸಮರ್ಥ ವಾದ ಮಂಡಿಸಲಾಗುವುದು. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಿಗೆ ಸಾಮಾನ್ಯವಾಗಿ ಜಾಮೀನು ದೊರೆಯುವುದಿಲ್ಲ. ಆದರೆ ನ್ಯಾಯಮೂರ್ತಿಗಳು ಜಾಮೀನು ಕೊಟ್ಟಿದ್ದಾರೆ. ರಾಜ್ಯಸರಕಾರದ ಪರ ವಕೀಲರು ನ್ಯಾಯಾಲಯದ ಮುಂದೆ ಸತ್ಯಾಸತ್ಯತೆಗಳನ್ನು ವಿವರಿಸಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.