ನವದೆಹಲಿ, ಆ.12(DaijiworldNews/AA): 'ರಾಹುಲ್ ಗಾಂಧಿ ವಿಷಕಾರಿ ಮತ್ತು ವಿದ್ವಂಸಕಾರಿ ವ್ಯಕ್ತಿ. ತಾವೇನಾದರೂ ಪ್ರಧಾನಿಯಾಗಲು ಸಾಧ್ಯವಾದಿದ್ದರೆ, ಈ ದೇಶವನ್ನೇ ನಾಶಮಾಡಬೇಕು ಎಂಬುದು ಅವರ ಅಜೆಂಡಾ' ಎಂದು ಬಿಜೆಪಿ ಸಂಸದೆ ಕಂಗನಾ ರಣಾವತ್ ಆರೋಪಿಸಿದ್ದಾರೆ.
ಅಮೆರಿಕದ ಶಾರ್ಟ್ ಶೆಲ್ಲರ್ ಕಂಪನಿ ಹಿಂಡೆನ್ಬರ್ಗ್, ಅದಾನಿ ಷೇರು ಹಗರಣಕ್ಕೆ ಸಂಬಂಧಿಸಿದಂತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ಮತ್ತು ಅವರ ಪತಿ ಧವಲ್ ಬುಚ್ ವಿರುದ್ಧ ಮಾಡಿರುವ ಆರೋಪಗಳ ತನಿಖೆಗೆ ರಾಹುಲ್ ಒತ್ತಾಯಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ರಾಹುಲ್ ಗಾಂಧಿ ಅಪಾಯಕಾರಿ ವ್ಯಕ್ತಿ ಎಂದು ಕರೆದಿದ್ದಾರೆ.
'ಹಿಂಡೆನ್ಬರ್ಗ್ ವರದಿಯು ನಮ್ಮ ಷೇರು ಮಾರುಕಟ್ಟೆಯನ್ನು ಗುರಿಯಾಗಿಸಿದೆ. ದೇಶದ ಭದ್ರತೆ ಮತ್ತು ಆರ್ಥಿಕತೆಯನ್ನು ಅಸ್ಥಿರಗೊಳಿಸಲು ರಾಹುಲ್ ಗಾಂಧಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
'ಮಿ. ರಾಹುಲ್ ಗಾಂಧಿ, ಜೀವನಪರ್ಯಂತ ವಿರೋಧ ಪಕ್ಷದಲ್ಲೇ ಕುಳಿತುಕೊಳ್ಳಲು ಹಾಗೂ ಈಗ ಅನುಭವಿಸುತ್ತಿರುವಂತೆಯೇ, ಈ ರಾಷ್ಟ್ರದ ಜನರ ವೈಭವ, ಪ್ರಗತಿ ಮತ್ತು ರಾಷ್ಟ್ರೀಯತೆಯನ್ನು ಅನುಭವಿಸಲು ಸಜ್ಜಾಗಿ, ದೇಶದ ಜನರು ನಿಮ್ಮನ್ನು ಎಂದಿಗೂ ತಮ್ಮ ನಾಯಕ ಎಂದು ಒಪ್ಪುವುದಿಲ್ಲ. ಗೌರವಕ್ಕೆ ಅರ್ಹವಲ್ಲದ ವ್ಯಕ್ತಿ ನೀವು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.