ತುಂಗಭದ್ರಾ, ಆ 13 (DaijiworldNews/MS): ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಸರಪಳಿ ತುಂಡಾಗಿ ನೀರು ಪೋಲಾಗುತ್ತಿರುವ ತುಂಗಭದ್ರಾ ಜಲಾಶಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ತಂಡ ಭೇಟಿ ನೀಡಿ ಪರಿಶೀಲಿಸಿತು.ತಂಡದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಉಪಸ್ಥಿತರಿದ್ದರು.
ಬಳಿಕ ಬಿ.ವೈ. ವಿಜಯೇಂದ್ರ. ತುಂಗಭದ್ರಾ ಜಲಾಶಯ ರೈತರ ಜೀವನಾಡಿಯಾಗಿದೆ. ರಾಜ್ಯದ ರೈತರ ಪರವಾಗಿ ಸರ್ಕಾರ ನಿಲ್ಲಬೇಕು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳನ್ನು ಹೊಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಘಟನೆಗೆ ರಾಜ್ಯ ಸರ್ಕಾರವೇ ಹೊಣೆ ಹೊರಬೇಕು. ಸರ್ಕಾರ ಮುಖ್ಯ ಇಂಜಿನಿಯರ್ ನೇಮಕ ಮಾಡಿಲ್ಲ. ಈ ಘಟನೆಯಲ್ಲಿ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ತಜ್ಞರು ನೀಡಿದ ಯೋಜನೆಯನ್ನು ಅನುಷ್ಠಾನ ಮಾಡಿಲ್ಲ. ರಾಜ್ಯ ಸರ್ಕಾರ ವೈಫಲ್ಯತೆಯಿಂದ ಈ ರೀತಿಯ ಘಟನೆ ಸಂಭವಿಸಿದೆ. ಪ್ರತಿ ಹೆಕ್ಟೇರ್ ಗೆ ತಲಾ 50 ಸಾವಿರ ಪರಿಹಾರ ನೀಡಬೇಕು. ತುಂಗಭದ್ರಾ ಜಲಾಶಯ ಕಲ್ಯಾಣ ಕರ್ನಾಟಕದಲ್ಲಿ ರೈತರಿಗೆ ಆಶಾಕಿರಣವಾಗಿದೆ. ಕಳೆದ ಬಾರಿ ಬರಗಾಲದಿಂದ ರೈತರು ಕಂಗಾಲಾಗಿದ್ದರೂ ಈ ಬಾರಿ ಎರಡು ಬೆಳೆ ಬೆಳೆಯಬಹುದು ಎಂಬ ಸಂತಸದಲ್ಲಿದ್ದರು. ಇಂತಹ ಸಮಯದಲ್ಲಿ ಗೇಟ್ ಒಡೆದು ನೀರು ಪೋಲಾಗಿರುವುದು ರೈತರಲ್ಲಿ ಆಘಾತ ಮೂಡಿಸಿದೆ ಎಂದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ, ತುಂಗಭದ್ರಾ ಮಂಡಳಿ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ. ಜಲಾಶಯದ 19ನೇ ಕ್ರಸ್ಟ್ ಗೇಟ್ ಸರಪಳಿ ಕಳಚಿರುವುದರಿಂದ ಸುಮಾರು 60 ರಿಂದ 70 ಟಿಎಂಸಿ ನೀರು ಪೋಲಾಗಿದೆ. ಹೀಗಾಗಿ ಈ ಬಾರಿ ರೈತರಿಗೆ ಒಂದು ಬೆಳೆ ಬೆಳೆಯಲು ಮಾತ್ರ ನೀರು ಬಿಡಬಹುದು ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಬಸವರಾಜ ಬೊಮ್ಮಾಯಿ, ಜಲಾಶಯದ ಗೇಟ್ ಸರಪಳಿ ಕಳಚಿರುವ ಹಿಂದೆ ಅಧಿಕಾರಿಗಳು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಕಾರಣ ಎಂದು ತಿಳಿಸಿದರು.