ಕೊಪ್ಪಳ, ಆ.13(DaijiworldNews/AA): ಈಗ ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ಮಾಡೋದಕ್ಕೆ ಸುಮಾರು 60 ಟಿಎಂಸಿನಷ್ಟು ನೀರನ್ನ ಹೊರಗೆ ಬಿಡಬೇಕು. ಆದ್ರೆ ಇನ್ನೂ ಅಕ್ಟೋಬರ್ ವರೆಗೆ ಮಳೆ ಇರೋದ್ರಿಂದ ಈಗ ಹೊರಗೆ ಹೋದಷ್ಟು ನೀರು ತುಂಬುವ ಸಾಧ್ಯತೆ ಇದೆ. ಈ ವಿಶ್ವಾಸವನ್ನು ನಾವೆಲ್ಲರೂ ಇಟ್ಟುಕೊಳ್ಳೋಣ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ಅವರಿಂದು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ, 19ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯ 1952-53ರಲ್ಲಿ ಪೂರ್ಣಗೊಂಡಿತ್ತು. ಆಗಿನಿಂದ ಏನೂ ತೊಂದರೆ ಆಗಿರಲಿಲ್ಲ. ಈಗ ತೊಂದರೆಯಾಗಿದೆ. 19ನೇ ಕ್ರಸ್ಟ್ ಗೇಟ್ ಚೈನ್ ಕಟ್ಟಾಗಿದ್ದರಿಂದ ಸಮಸ್ಯೆಯಾಗಿದೆ ಎಂದರು.
ಈಗ ಕ್ರಸ್ಟ್ ಗೇಟ್ ರಿಪೇರಿ ಮಾಡಬೇಕೆಂದರೆ ನೀರನ್ನು ಡ್ಯಾಂನಿಂದ ಹೊರಕ್ಕೆ ಬಿಡಬೇಕು. ಇದರಿಂದ ರೈತರಿಗೆ ಮೊದಲ ಬೆಳೆಗೆ ಯಾವುದೇ ತೊಂದರೆ ಆಗಲ್ಲ. ಅಲ್ಲದೇ ಹವಾಮಾನ ಮುನ್ಸೂಚನೆಯಂತೆ ಅಕ್ಟೋಬರ್ ವರೆಗೆ ಮಳೆ ಇರುವುದರಿಂದ ಈಗ ಹರಿದಷ್ಟೂ ನೀರು ಡ್ಯಾಂಗೆ ತುಂಬುವ ಸಾಧ್ಯತೆಯಿದೆ. ನಮ್ಮದು ರೈತಪರ ಸರ್ಕಾರ, ರೈತರಿಗೆ ತೊಂದರೆಯಾಗೋದಕ್ಕೆ ಬಿಡಲ್ಲ ಎಂದು ತಿಳಿಸಿದರು.
ಮುಂದುವರಿದು ಬಿಜೆಪಿಯ ಟೀಕೆಗೆ ತಿರುಗೇಟು ನೀಡಿದ ಸಿಎಂ, ಜಲಾಶಯಗಳ ನಿರ್ವಹಣೆಗೆ ಒಂದು ಮಂಡಳಿ ಇದೆ. ಅದು ಕೇಂದ್ರದ ಸುಪರ್ದಿಗೆ ಬರುತ್ತೆ. ಈ ಮಂಡಳಿಯಲ್ಲಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಅಧಿಕಾರಿಗಳು ಇದ್ದಾರೆ. ಆದರೆ ಈ ವಿಚಾರದಲ್ಲಿ ನಾನು ರಾಜಕೀಯ ಮಾಡಲ್ಲ. ಯಾರ ಮೇಲೂ ತಪ್ಪು ಹೊರಿಸಲ್ಲ. ಸರಿಪಡಿಸುವ ಕೆಲಸ ಆಗುತ್ತೆ ಎಂದು ಭರವಸೆ ನೀಡಿದರು.