ಬೆಂಗಳೂರು,ಮೇ 22 (Daijiworld News/MSP): ಕರ್ನಾಟಕದ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಅವರು ಮೇ 23 ರ ನಾಳೆ ಸಂಜೆವರೆಗೆ ಮಾತ್ರ ಅಧಿಕಾರದಲ್ಲಿರುತ್ತಾರೆ. ಮೇ 24 ರ ಬಳಿಕ ಅವರು ರಾಜೀನಾಮೆ ನೀಡಿ ಮಾಜಿ ಸಿಎಂ ಕುಮಾರಸ್ವಾಮಿ ಆಗುತ್ತಾರೆ ಎಂದು ಕೇಂದ್ರ ಸಚಿವ ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.
ಅವರು ಬೆಂಗಳೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾದ ಬಳಿಕ ರಾಜ್ಯದಲ್ಲಿ ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧ ಆಗುತ್ತದೆ. ಫಲಿತಾಂಶದಿಂದ ಇಲ್ಲಿ ಮಾತ್ರ ಅಲ್ಲ ಇನ್ನು ಯಾವ ಯಾವ ರಾಜ್ಯದ ಯಾವ್ಯಾವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೋ ಗೊತ್ತಿಲ್ಲ ಎಂದರು.
ಈ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಚಂದ್ರಬಾಬು ನಾಯ್ಡು ಸಮಾನ ಮನಸ್ಕರು . ಚಂದ್ರಬಾಬು ನಾಯ್ಡು ಅವರ ಮೇಲಿನ ನಂಬಿಕೆಯನ್ನು ಆಂಧ್ರಪ್ರದೇಶದ ಜನರು ಕಳೆದುಕೊಂಡಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಅವರಿಗೆ ಬಾರಿ ಸೋಲು ಖಚಿತ. ಇನ್ನು ಇದಕ್ಕೆ ಕುಮಾರಸ್ವಾಮಿ ಅವರೂ ಕುಡಾ ಹೊರತಲ್ಲ. ಅವರಿಗೂ ತಮ್ಮ ಅಧಿಕಾರ ಹೋಗುತ್ತೆ ಎಂದು ತಿಳಿದಿದೆ ಎಂದು ಹೇಳಿದರು.
ಇನ್ನು ರೋಷನ್ ಬೇಗ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಸತ್ಯವನ್ನು ಬಹಳ ಸಮಯ ಮುಚ್ಚಿಡಲು ಸಾಧ್ಯವಿಲ್ಲ. ರೋಷನ್ ಬೇಗ್ ನಂತಹ ಹಲವರಿಗೆ ಇವೆಲ್ಲವನ್ನು ನೋಡಿ ರೋಸಿ ಹೋಗಿದೆ. ರಾಜ್ಯ ಕಂಡ ಅತ್ಯಂತ ದುರಂಹಕಾರಿ ಮಾಜಿ ಸಿಎಂ ಎಂದ್ರೆ ಅದು ಸಿದ್ಧರಾಮಯ್ಯ ಎಂದರು.