ಹಾವೇರಿ, ಮೇ22(Daijiworld News/SS): ಸರ್ಕಾರಿ ಶಾಲೆಯ ಶಿಕ್ಷಕರೇ ಸೇರಿಕೊಂಡು ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯುವ ಸಲುವಾಗಿ ಮಿನಿ ಬಸ್ ಖರೀದಿ ಮಾಡುವ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಮಾತ್ರವಲ್ಲ, ಮೂಲ ಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಇತರ ಶಾಲೆಗಳಿಗೆ ಮಾದರಿಯಾಗಿದ್ದಾರೆ.
ಹಾವೇರಿ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆಯ ಶಿಕ್ಷಕರೇ ಸೇರಿಕೊಂಡು ಬ್ಯಾಂಕಿನಲ್ಲಿ .3 ಲಕ್ಷ ಸಾಲ ಮಾಡಿ ಮಕ್ಕಳಿಗಾಗಿ 32 ಸೀಟಿನ ಮಿನಿ ಬಸ್ ಖರೀದಿಸಿದ್ದಾರೆ. ಸರ್ಕಾರಿ ಶಾಲೆಗೆ ಬಸ್ ವ್ಯವಸ್ಥೆ ಮಾಡಿದ ನಂತರ ಶಾಲೆ ಬಿಟ್ಟಿದ್ದ ಅನೇಕ ವಿದ್ಯಾರ್ಥಿಗಳು ಶಾಲೆಗಳತ್ತ ಮುಖಮಾಡಿದ್ದಾರೆ.
2018ರ ಕಳೆದ ಆಗಸ್ಟ್ ತಿಂಗಳಲ್ಲೇ ಬಸ್ ಖರೀದಿಸಲಾಗಿದ್ದು, ಇದರಿಂದ ಶಾಲೆ ಬಿಟ್ಟಿದ್ದ ಅನೇಕ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಕ್ಕಳಂತೆ ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ. ಮಾತ್ರವಲ್ಲ, ಶಾಲೆಗೆ ಬಸ್ ವ್ಯವಸ್ಥೆ ಇರುವುದರಿಂದ ಈ ಭಾರೀಯ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ.
ಸರ್ಕಾರಿ ಶಾಲೆಯಿಂದ ಸುಮಾರು 3-4 ಕಿ.ಮೀ. ದೂರದ ಮಕ್ಕಳು ಶಾಲೆಗೆ ಪ್ರವೇಶ ಪಡೆದಿದ್ದರೂ ಅವರಿಗೆ ಬರಲು ಸರಿಯಾದ ವಾಹನ ಸೌಲಭ್ಯ ಇರಲಿಲ್ಲ. ತಕ್ಷಣಕ್ಕೆ ಹಣ ಇಲ್ಲದ್ದರಿಂದ ಮುಖ್ಯಾಧ್ಯಾಪಕರೇ .3 ಲಕ್ಷ ಸಾಲ ಮಾಡಿ ಕಳೆದ ಆಗಸ್ಟ್ನಲ್ಲಿ ಸೆಕೆಂಡ್ ಹ್ಯಾಂಡ್ ಮಿನಿಬಸ್ ಖರೀದಿಸಿದ್ದಾರೆ. ವಾಹನ ವ್ಯವಸ್ಥೆ ಮಾಡಿರುವುದರಿಂದ ಈಗಾಗಲೇ 20ಕ್ಕೂ ಹೆಚ್ಚು ಪಾಲಕರು ಮಕ್ಕಳನ್ನು ಸೇರಿಸಲು ಆಸಕ್ತಿ ತೋರಿದ್ದಾರೆ. ಸದ್ಯ ಶಾಲೆಯಲ್ಲಿ 170 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.