ನವದೆಹಲಿ, ಮೇ22(Daijiworld News/SS): ಬಿಜೆಪಿಯ ತತ್ವ, ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ಸ್ವಾಗತಿಸುತ್ತೇವೆ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಸ್ವಾರ್ಥಕ್ಕೆ ಬಳಸಿಕೊಂಡು ಕಾಂಗ್ರೆಸ್ ಪಕ್ಷವು ಕಡೆಗಣಿಸಿದೆ ಎಂಬ ಸಂಗತಿಯೂ ರೋಷನ್ ಬೇಗ್ ಅವರಿಗೆ ತಡವಾಗಿ ಅರಿವಿಗೆ ಬಂದಿದೆ. ಬಹುಶಃ ಮೊದಲೇ ಅರಿವಿಗೆ ಬಂದಿದ್ದರೂ, ಈ ಬಗ್ಗೆ ಏನೂ ಹೇಳಲಾಗದೇ ಚಡಪಡಿಸುತ್ತಿದ್ದರು ಅನ್ನಿಸುತ್ತಿದೆ ಎಂದು ಹೇಳಿದರು.
ಸತ್ಯವನ್ನು ಯಾರಿಂದಲೂ ಮುಚ್ಚಿಡಲಾಗದು. ಸತ್ಯ ಒಂದಿಲ್ಲೊಂದು ದಿನ ಹೊರಬೀಳಲೇಬೇಕು. ರೋಷನ್ ಬೇಗ್ ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯವನ್ನು ಹೊರ ಹಾಕಿರುವುದು ರಾಜ್ಯ ರಾಜಕಾರಣಕ್ಕೆ ಹೊಸ ದಿಕ್ಕನ್ನು ಸೂಚಿಸಬಹುದು ಎಂದು ಅಭಿಪ್ರಾಯಪಟ್ಟರು.
ಇಷ್ಟು ದಿನಗಳ ಕಾಲ ಸಿದ್ದರಾಮಯ್ಯ ಅವರ ಮನಸ್ಸಿನ ಭಾವನೆಗಳಿಗೆ ಪ್ರತಿರೋಧ ಒಡ್ಡಲು ಬಹುತೇಕ ಕಾಂಗ್ರೆಸ್ ಮುಖಂಡರು ಹೆದರುತ್ತಿದ್ದರು. ಆದರೆ ಇದೀಗ ಬೇಗ್ ಅವರು ಸತ್ಯ ಸಂಗತಿಗಳನ್ನು ಹೊರಹಾಕಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಜಮೀರ್ ಅಹಮದ್ ಅವರು ಬೆಂಗಳೂರಿನಲ್ಲಿ ನನ್ನ ಸ್ಥಾನ ಆಕ್ರಮಿಸಿದ್ದು, ಅದಕ್ಕೆ ಪರೋಕ್ಷವಾಗಿ ಸಿದ್ದರಾಮಯ್ಯ ಕಾರಣ ಎಂದೇ ಭಾವಿಸಿರುವ ರೋಷನ್ ಬೇಗ್, ಅನಿವಾರ್ಯವಾಗಿ ಸಿದ್ದರಾಮಯ್ಯ ಅವರ ವಿರುದ್ಧ ಕಿಡಿಕಾರಿದ್ದಾರೆ ಎಂದು ಹೇಳಿದರು.