ಕಾಸರಗೋಡು, ಮೇ 22 (Daijiworld News/SM): ನಾಳೆ ಲೋಕಸಭೆ ಚುನಾವಣೆಯ ಮತ ಎಣಿಕೆ ನಡೆಯಲಿದ್ದು, ನಾಳೆ ಬೆಳಗ್ಗೆಯಿಂದ ಶುಕ್ರವಾರ ಬೆಳಗ್ಗೆ 8 ಗಂಟೆಯ ತನಕ ಬೇಕಲ ಠಾಣಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಬೇಕಲ ಠಾಣಾ ವ್ಯಾಪ್ತಿಯ ಪೆರಿಯ, ಕಲ್ಯೊಟ್ ಪರಿಸರದಲ್ಲಿ ಕೃಪೇಶ್ ಹಾಗೂ ಶರತ್ ಲಾಲ್ ಎಂಬ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆ ನಡೆಸಲಾಗಿತ್ತು. ಈ ಹಿನ್ನೆಲೆ ಈ ಪ್ರದೇಶ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಇನ್ನೊಂದೆಡೆ ರಾಜಕೀಯ ಹಿಂಸಾಚಾರ ಮರು ಕಳಿಸುವ ಸಾಧ್ಯತೆ ಇರುವ ಹಿನ್ನೆಲೆ ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ನಿಷೇಧಾಜ್ಞೆ ಘೋಷಿಸಿದ್ದಾರೆ.
ಹತ್ಯೆ ನಡೆದ ಬಳಿಕ ಈ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಬಳಿಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದರು. ಅಲ್ಲದೆ, ಹತ್ಯೆಯಲ್ಲಿ ಭಾಗಿಯಾಗಿದ್ದ ಸಿಪಿಎಂ ಕಾರ್ಯಕರ್ತರನ್ನು ಸೇರಿದಂತೆ ಹಲವು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ.