ನವದೆಹಲಿ,ಮೇ23(DaijiWorldNews/AZM):ಈ ಬಾರಿ ಲೋಕಸಭಾ ಚುನಾವಣಾ ಫಲಿತಾಂಶ ವಿಳಂಬವಾಗಲಿದೆ. ಇದಕ್ಕೆ ಪ್ರಮುಖ ಕಾರಣ ವಿವಿ ಪ್ಯಾಟ್ ಗಳ ತಾಳೆ ಪ್ರಕ್ರಿಯೆಯಾಗಿದೆ.
ಹಿಂದಿನ ಚುನಾವಣೆಯಲ್ಲಿ ಈ ಸಮಸ್ಯೆ ಇರಲಿಲ್ಲ. ಯಾಕೆಂದರೆ ಮತ ಎಣಿಕೆ ಕಾರ್ಯ ಮತಯಂತ್ರಗಳ ಆಗಮನದೊಂದಿಗೆ ಅರ್ಧ ದಿನದಲ್ಲಿ ಪೂರ್ಣಗೊಳ್ಳುತ್ತಿತ್ತು. ಆದರೆ, ಈ ಬಾರಿ ಮತ ಎಣಿಕೆ ಕಾರ್ಯ ಬೇಗನೆ ನಡೆದರೂ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಲಿದೆ. ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ಈ ಬಾರಿ ಪ್ರತಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಮತಗಟ್ಟೆಗಳ ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಫಲಿತಾಂಶದ ಜತೆ ತಾಳೆ ಮಾಡಬೇಕಾಗಿದೆ. ಇದಕ್ಕೆ ಸಮಯ ಹಿಡಿಯುತ್ತದೆ. ಹೀಗಾಗಿ ಫಲಿತಾಂಶ ಹೊರಬೀಳಲು ಸುಮಾರು 4 ಗಂಟೆಗಳಷ್ಟು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಇನ್ನೂ ಹೆಚ್ಚಾದರೂ ಅಚ್ಚರಿ ಇಲ್ಲ. ಮೊದಲಿಗೆ ಇವಿಎಂ ಮತ ಎಣಿಕೆಯನ್ನು ಮಾಡುವ ಚುನಾವಣಾ ಆಯೋಗ, ಬಳಿಕ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 40 ಮತಗಟ್ಟೆಗಳ ವಿವಿಪ್ಯಾಟ್ ಮತ ಖಾತರಿ ಚೀಟಿಗಳ ಎಣಿಕೆ ಮತ್ತು ತಾಳೆ ಪ್ರಕ್ರಿಯೆ ನಡೆಸುತ್ತದೆ.
ಇನ್ನೂ ಮತ್ತೊಂದು ಸಮಸ್ಯೆ ಎದುರಾಗುತ್ತಿದ್ದು, ಒಂದು ವೇಳೆ ಕಂಟ್ರೋಲ್ ಯುನಿಟ್ ನಲ್ಲಿ ಮತಗಳು ಯಾವ ಪಕ್ಷಕ್ಕೆ ಹೋಗಿದೆ ಎಂಬುವುದು ಕಾಣಿಸದೇ ಇದ್ದರೆ, ಅದನ್ನು ಪ್ರತ್ಯೇಕವಾಗಿಟ್ಟು ಕೊನೆಯಲ್ಲಿ ಮತ ಖಾತರಿ ಚೀಟಿಗಳನ್ನು ಎಣಿಕೆ ಮಾಡಲಾಗುವುದು.
ಮಾನವ ಲೋಪದಿಂದ ಸಮಸ್ಯೆ ಉಂಟಾದರೂ ಮತ ಖಾತರಿ ಚೀಟಿಯನ್ನು ಎಣಿಕೆ ಮಾಡಲಾಗುತ್ತದೆ. ಹೀಗೇನಾದರೂ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ಅದರಿಂದಲೂ ಫಲಿತಾಂಶ ವಿಳಂಬವಾಗುವ ಸಾಧ್ಯತೆ ಇದೆ.