ಬೆಂಗಳೂರು, ಮೇ 23 (Daijiworld News/MSP): 2019 ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಲೆಯ ಮುಂದೆ ಮಹಾಘಟಬಂಧನ ಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಬಿಜೆಪಿ ನಿರೀಕ್ಷೆಗೂ ಮೀರಿದ ಮುನ್ನಡೆ ಸಾಧಿಸಿದೆ. ಈ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. " ಈ ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಜನತಾ ಪಾರ್ಟಿಗೆ ಮತ್ತು ಮುಖ್ಯಪಾತ್ರ ವಹಿಸಿದ್ದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಮುಂದಿನ ಐದು ವರ್ಷ ಜನ ಮೆಚ್ಚುವಂತಹ, ಇಡೀ ದೇಶವನ್ನು ಕುವೆಂಪು ಅವರು ಹೇಳಿರುವಂತೆ "ಸರ್ವಜನಾಂಗದ ಶಾಂತಿಯ ತೋಟ"ವನ್ನಾಗಿ ಮಾಡುವ ರೀತಿಯಲ್ಲಿ ಆಡಳಿತ ನೀಡಲಿ ಎಂದು ಹಾರೈಸುತ್ತೇನೆ.
ಆ ಬಳಿಕ ಮತ್ತೊಂದು ಟ್ವೀಟ್ ಮಾಡಿ , "ಪ್ರಜಾಪ್ರಭುತ್ವದಲ್ಲಿ ಜನಾಭಿಪ್ರಾಯಕ್ಕೆ ತಲೆ ಬಾಗಬೇಕು. ಎಲ್ಲಾ ಕ್ಷೇತ್ರಗಳಲ್ಲಿ ನಾನು ಪ್ರಚಾರ ಮಾಡಿದ್ದೇನೆ. ಮೈಸೂರು ಒಂದು ಮಾತ್ರ ಪ್ರತಿಷ್ಟೆಯ ಕ್ಷೇತ್ರ ಆಗಿರಲಿಲ್ಲ. ಫಲಿತಾಂಶದಿಂದ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ’ ಎಂದಿದ್ದಾರೆ
ಮತ್ತೊಂದು ಟ್ವೀಟ್ ನಲ್ಲಿ " ರಾಜ್ಯದಿಂದ ಆಯ್ಕೆಯಾದ ಎಲ್ಲ ಸಂಸದರೂ ಚುನಾವಣೆ ಮುಗಿದ ಮೇಲೆ ಪಕ್ಷಾತೀತವಾಗಿ ನಮ್ಮ ರಾಜ್ಯದ ಪ್ರತಿನಿಧಿಗಳಾಗಿರುತ್ತಾರೆ, ಅವರೆಲ್ಲರಿಗೂ ಅಭಿನಂದನೆಗಳು.ಲೋಕಸಭೆಯಲ್ಲಿ ರಾಜ್ಯದ ದನಿ ಕೇಳಿಸುವಂತೆ ಮತ್ತು ಹಿತರಕ್ಷಿಸುವಂತೆ ಅವರೆಲ್ಲರೂ ಕೆಲಸ ಮಾಡಲಿ ಎಂದು ಹಾರೈಸುತ್ತೇನೆ " ಎಂದಿದ್ದಾರೆ .