ಅಮೇಥಿ, ಮೇ 23 (Daijiworld News/SM): ಕಾಂಗ್ರೆಸ್ ಭದ್ರಕೋಟೆ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಕ್ಷೇತ್ರವಾಗಿರುವ ಅಮೇಥಿಯಲ್ಲಿ ಸ್ಮೃತಿ ಇರಾನಿ ಪ್ರಚಂಡ ಗೆಲುವು ದಾಖಲಿಸಿದ್ದು, ರಾಹುಲ್ ಗಾಂಧಿಗೆ ಭಾರೀ ಮುಖಭಂಗವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಹಿರಿಯ ಮುಖಂಡರ ಮುಂದೆ ರಾಹುಲ್ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರ ವಿರುದ್ಧ ರಾಹುಲ್ ಇದೇ ಮೊದಲ ಬಾರಿಗೆ ಸೋಲನುಭವಿಸಿದ್ದಾರೆ. ಕಳೆದ ಮೂರು ಚುನಾವಣೆಗಳಲ್ಲೂ ಕೂಡ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಅಂತರವನ್ನು ಕಡಿಮೆಯಾಗುತ್ತಾ ಬಂದಿತ್ತು. 2009 ರಲ್ಲಿ 3.7 ಲಕ್ಷ ಮತಗಳ ಅಂತರದಿಂದ ರಾಹುಲ್ ಗೆಲುವು ಸಾಧಿಸಿದ್ದರು. ಆದರೆ, 2014 ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ ಅವರು ಕೇವಲ ಒಂದು ಲಕ್ಷ ಮತಗಳ ಅಂತರದಿಂದ ರಾಹುಲ್ ಗಾಂಧಿ ಅವರ ವಿರುದ್ಧ ಸೋತಿದ್ದರು. ಆದರೆ 2019ರ ಈ ಬಾರಿಯ ಚುನಾವಣೆಯಲ್ಲಿ ರಾಹುಲ್ ಹೀನಾಯವಾಗಿ ಸೋಲುವ ಮೂಲಕ ತೀವ್ರ ಮುಖಭಂಗ ಅನುಭವಿಸಿದ್ದಾರೆ.
ಅಮೇಥಿ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋತಿದ್ದು ಎರಡೇ ಬಾರಿ. 1977 ರಲ್ಲಿ ಜನತಾ ಪಕ್ಷದ ಅಲೆ ಎದ್ದಿದ್ದ ಸಮಯದಲ್ಲಿ ಮತ್ತು 1998 ರಲ್ಲಿ ಮಾತ್ರವೇ ಕಾಂಗ್ರೆಸ್ ಪಕ್ಷ ಈ ಕ್ಷೇತ್ರದಲ್ಲಿ ಸೋತಿತ್ತು. ಸಂಜಯ್ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೀಗೆ ಪ್ರಮುಖರು ಈ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಅಮೇಥಿಯನ್ನು ತನ್ನ ಭದ್ರಕೋಟೆಯನ್ನಾಗಿಸಿದ್ದರು.
ಆದರೆ ರಾಹುಲ್ ಗಾಂಧಿ ಅವರು ಈ ಬಾರಿ ಸೋಲನುಭವಿಸುವ ಮೂಲಕ ಆಘಾತ ಅನುಭವಿಸಿದ್ದಾರೆ.