ನವದೆಹಲಿ, ಮೇ23(Daijiworld News/SS): ಗೆದ್ದವರಿಗೆ ಅಭಿನಂದನೆಗಳು ಆದರೆ ಸೋತ ಅಭ್ಯರ್ಥಿಗಳು ಭಯ ಗೊಳ್ಳುವುದು ಬೇಡ, ವಿಶ್ವಾಸ ಕಳೆದುಕೊಳ್ಳುವುದು ಬೇಡ ಮತ್ತೊಮ್ಮೆ ಪ್ರಯತ್ನ ಮಾಡೋಣ ಎಂದು ರಾಹುಲ್ ಗಾಂಧಿ ಹೇಳಿದರು.
ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಜನರೇ ಮಾಲೀಕರು, ಅವರ ತೀರ್ಪನ್ನು ನಾವು ಸ್ವೀಕರಿಸುತ್ತೇವೆ. ಅವರು ಸ್ಪಷ್ಟವಾಗಿ ತಮ್ಮ ನಿರ್ಣಯ ಹೇಳಿದ್ದಾರೆ ಎಂದು ತಿಳಿಸಿದರು.
ನಮ್ಮದು ವಿಚಾರಧಾರೆಯ ಹೋರಾಟ, ಬಿಜೆಪಿಯ ವಿಚಾರಧಾರೆಗಿಂತಲೂ ಭಿನ್ನವಾದ ವಿಚಾರಧಾರೆಯನ್ನು ಕಾಂಗ್ರೆಸ್ ಹೊಂದಿದೆ. ನಮ್ಮ ವಿಚಾರಧಾರೆಗಾಗಿ ನಮ್ಮ ಹೋರಾಟ ಮುಂದುವರೆಯಲಿದೆ. ಗೆದ್ದವರಿಗೆ ಅಭಿನಂದನೆಗಳು ಆದರೆ ಸೋತ ಅಭ್ಯರ್ಥಿಗಳು ಭಯಗೊಳ್ಳುವುದು ಬೇಡ. ವಿಶ್ವಾಸ ಕಳೆದುಕೊಳ್ಳುವುದು ಬೇಡ. ಮತ್ತೊಮ್ಮೆ ಪ್ರಯತ್ನ ಮಾಡೋಣ ಎಂದು ಹೇಳಿದರು.
ಅಮೇಥಿಯಲ್ಲಿ ಸ್ಮೃತಿ ಇರಾನಿ ಅವರಿಗೆ ಗೆಲುವಾಗಿದೆ, ಅದು ಜನರ ತೀರ್ಪು ನಾನದನ್ನು ಒಪ್ಪುತ್ತೇನೆ. ಆದರೆ ಸ್ಮೃತಿ ಅಮೇಥಿಯ ಜನರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಅವರಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಗೆದ್ದ ಬಿಜೆಪಿ ಮತ್ತು ಮೋದಿ ಅವರನ್ನು ಮನಃಪೂರ್ವಕವಾಗಿ ಅಭಿನಂದಿಸಿದರು.