ಚಾಮರಾಜನಗರ, ಮೇ 23(Daijiworld News/SM): ಸಾಕಷ್ಟು ಕುತೂಹಲ ಕೆರಳಿಸಿದ್ದ ಚಾಮರಾಜ ನಗರ ಕ್ಷೇತ್ರದಲ್ಲಿ ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ರೋಚಕ ಗೆಲುವು ದಾಖಲಿಸುವ ಮೂಲಕ ಶಿಷ್ಯನ ವಿರುದ್ಧ ಗೆದ್ದು ಬೀಗಿದ್ದಾರೆ.
ಕಾಂಗ್ರೆಸ್ನ ಆರ್. ಧ್ರುವನಾರಾಯಣ್ ಎದುರು ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ರೋಚಕ ರೀತಿಯಲ್ಲಿ ಮುನ್ನಡೆ ಪಡೆದುಕೊಂಡಿದ್ದರು. ಅಂತಿಮವಾಗಿ ಶ್ರೀನಿವಾಸ್ ಪ್ರಸಾದ್ 838 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚಾಮರಾಜ ನಗರದಲ್ಲಿ ಬಿಜೆಪಿ ಇತಿಹಾಸ ನಿರ್ಮಿಸಿದೆ. ಚಾಮರಾಜನಗರ ಲೋಕಸಭೆ ಇತಿಹಾಸದಲ್ಲಿಯೇ ಬಿಜೆಪಿಗೆ ಇದು ಮೊದಲ ಗೆಲುವಾಗಿದೆ.
ಆರಂಭದಿಂದಲೂ ಮುನ್ನಡೆ ಸಾಧಿಸಿದ್ದ ಧ್ರುವನಾರಾಯಣ್ ಗೆಲುವು ಖಚಿತ ಎಂದು ಹೇಳಲಾಗಿತ್ತು. ಆದರೆ, 20ನೇ ಸುತ್ತಿನ ವೇಳೆಗೆ ಫಲಿತಾಂಶಕ್ಕೆ ರೋಚಕ ತಿರುವು ಸಿಕ್ಕಿತು. ಅಲ್ಲಿಯವರೆಗೂ ಹಿನ್ನಡೆ ಅನುಭವಿಸಿದ್ದ ಬಿಜೆಪಿಯ ವಿ. ಶ್ರೀನಿವಾಸ ಪ್ರಸಾದ್, ಏಕಾಏಕಿ ಮುನ್ನಡೆ ಸಾಧಿಸಿದ್ದರು.
ಚಾಮರಾಜನಗರದಲ್ಲಿ ಆರ್. ಧ್ರುವನಾರಾಯಣ್ ಗೆಲುವು ಸಾಧಿಸುವ ನಿರೀಕ್ಷೆಯಿತ್ತು, ಅಲ್ಲದೆ ಬಹುತೇಕ ಖಚಿತವಾಗಿತ್ತು. ಮೀಸಲು ಕ್ಷೇತ್ರವಾದ ಚಾಮರಾಜನಗರದಲ್ಲಿ ಕಾಂಗ್ರೆಸ್ನ ಆರ್. ಧ್ರುವನಾರಾಯಣ್, ಬಿಜೆಪಿ ಅಭ್ಯರ್ಥಿ ವಿ. ಶ್ರೀನಿವಾಸ್ ಪ್ರಸಾದ್ ವಿರುದ್ಧ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆಗೆ ಮುಂದಾಗಿದ್ದರು. ಆದರೆ ಈ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಹ್ಯಾಟ್ರಿಕ್ ಗೆಲುವಿನ ಕನಸು ಕಮರಿದ್ದು, ಶ್ರೀನಿವಾಸ್ ಪ್ರಸಾದ್ ಬಿಜೆಪಿಗೆ ಮೊದಲ ಗೆಲುವು ತಂದಿಕೊಟ್ಟಿದ್ದಾರೆ.