ನವದೆಹಲಿ, ಮೇ23(Daijiworld News/SS): ಚುನಾವಣೆಯಲ್ಲಿ 340ಕ್ಕೂ ಹೆಚ್ಚು ಸ್ಥಾನ ಪಡೆದಿರುವ ಎನ್ಡಿಎ ಮತ್ತೆ ಅಧಿಕಾರ ಕೈಗೆತ್ತಿಕೊಳ್ಳಲಿದೆ. ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬರುವುದು ಖಚಿತವಾಗಿದೆ. ನರೇಂದ್ರ ಮೋದಿ ಸತತ ಎರಡನೇ ಬಾರಿ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸಲಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ಡಿಎ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆ ಪ್ರಧಾನಿ ಮೋದಿ ಪ್ರಮಾಣವಚನಕ್ಕೆ ದಿನಾಂಕ ಕೂಡ ನಿಗದಿಯಾಗಿದ್ದು, ಇದೇ ಮೇ.29ರಂದು ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದೇ ವೇಳೆ ಮೋದಿ ಪ್ರಮಾಣವಚನ ಸಮಾರಂಭಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮರ್ ಪುಟಿನ್ ವಿಶೇಷ ಅತಿಥಿಯಾಗಿ ಆಗಮಿಸಲಿದ್ದಾರೆ. ಪ್ರಮಾಣವಚನ ಸಮಾರಂಭಕ್ಕೆ ಬರುವಂತೆ ಖುದ್ದು ಮೋದಿ ಅವರೇ ಆಮಂತ್ರಣ ನೀಡಿದ್ದು, ಪುಟಿನ್ ಈ ಆಮಂತ್ರಣವನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಬಾರಿ ಮೋದಿ ಪ್ರಧಾನಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಸಂದರ್ಭದಲ್ಲಿ ಸಾರ್ಕ್ ದೇಶಗಳ ಗಣ್ಯರನ್ನು ಆಹ್ವಾನಿಸಿದ್ದರು.