ನವದೆಹಲಿ, ಮೇ23(Daijiworld News/SS): ನಮ್ಮ ಪಕ್ಷ ಬಿಜೆಪಿಯ ನಿಜಕ್ಕೂ ಅದೃಷ್ಟ ಎಂದರೆ, ನಮ್ಮಲ್ಲಿರುವ ಕೋಟಿ ಕೋಟಿ ಕಾರ್ಯಕರ್ತರ ಮನದಲ್ಲಿರುವುದು ಕೇವಲ ಭಾರತ ಮಾತೆ, ಭಾರತ ಮಾತೆ. ಇದು ಮೆಚ್ಚುಗೆ ವಿಷಯ ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.
ವಿಜಯೋತ್ಸವದ ವೇಳೆ ಮಾತನಾಡಿದ ಅವರು, ನಾನು ಏನೇ ನನ್ನ ದೇಶದ ಮಾಡಿದರೂ ಅಭಿವೃದ್ಧಿಗಾಗಿ ಮಾಡುತ್ತೇನೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿರುವುದುನ್ನು ನಾನು ಎಂದಿಗೂ ಮರೆಯುವುದಿಲ್ಲ. ಜನರ ಪ್ರೀತಿ, ನಂಬಿಕೆ ನಾನು ಯಾವುದನ್ನೂ ಮರೆಯುವುದಿಲ್ಲ. ಜನರ ಸೇವೆಗಾಗಿಯೇ ನನ್ನ ಜೀವನ ಮುಡಿಪು ಎಂದು ಮೋದಿ ತಿಳಿಸಿದರು.
ನಮ್ಮ ದೇಶದಲ್ಲಿ ಕೆಲವು ದಶಕಗಳ ಹಿಂದೆ ನಮ್ಮದು ಎರಡು ಸ್ಥಾನ ಇತ್ತು. ಆದರೆ ಈಗ ಎರಡನೇ ಬಾರಿಯೂ ನಾವು ಅಧಿಕಾರಕ್ಕೆ ಬಂದಿದ್ದೇವೆ. ಎರಡು ಸ್ಥಾನ ಇದ್ದಾಗ ನಾವು ನಿರಾಶರಾಗಿರಲಿಲ್ಲ. ಈಗ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದರೂ ನಮ್ಮ ಆಶಯ, ನಮ್ರತೆ, ವಿನಯತೆ, ಧೋರಣೆ, ಸಿದ್ಧಾಂತಗಳನ್ನು ಮರೆತಿಲ್ಲ. ಮುಂದೆಯೂ ನಾವು ಯಾವುದನ್ನು ಕೂಡ ಮರೆಯುವುದಿಲ್ಲ ಎಂದು ಹೇಳಿದರು.
ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು. ದೇಶದ ಅಭಿವೃದ್ಧಿಗೆ ದೇಶದ ಜನತೆ ತಮ್ಮ ಮತಗಳ ಮೂಲಕ ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದು ಹೇಳಿದರು.
ಸಂತಸದ ಸಂಗತಿಯೆಂದರೆ ಬಿಜೆಪಿಯ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಸ್ವಯಂ ಮೇಘರಾಜನೇ ಮಳೆಯನ್ನು ಧರೆಗೆ ತಂದಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದರು.
ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದು ಅತಿ ದೊಡ್ಡ ಹಬ್ಬವಾಗಿದೆ. ಇಡೀ ಚುನಾವಣೆಯ ಇತಿಹಾಸದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಿದೆ. ಭಾರತದ 130 ಕೋಟಿ ಜನರಿಗೆ ಶಿರ ಬಾಗಿ ನಮಿಸುತ್ತೇನೆ ಎಂದು ಹೇಳೀದರು.