ಗುಲ್ಬರ್ಗ, ಮೇ 23 (Daijiworld News/SM): ಸೋಲಿಲ್ಲದ ಸರದಾರ ಎಂದೇ ಪ್ರಸಿದ್ದಿಯನ್ನು ಪಡೆದುಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸೋಲಿನ ಕಹಿಯುಂಡಿದ್ದಾರೆ.
ಸತತ 11 ಚುನಾವಣೆಗಳನ್ನು ಗೆದ್ದಿದ್ದ ಖರ್ಗೆ ಇತಿಹಾಸ ನಿರ್ಮಿಸಿದ್ದರು. ಆದರೆ, 12ನೇ ಚುನಾವಣೆಯಲ್ಲಿ ಖರ್ಗೆಗೆ ಸೋಲಾಗಿದೆ. ಪ್ರತಿಸ್ಪರ್ಧಿ ಬಿಜೆಪಿಯ ಡಾ. ಉಮೇಶ್ ಜಾದವ್ ವಿರುದ್ಧ ಖರ್ಗೆ ಸೋಲೊಪ್ಪಿಕೊಂಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಸುಮಾರು 5,24,740 ಮತಗಳನ್ನು ಪಡೆದರೆ, ಉಮೇಶ್ ಜಾದವ್ 6,20,192 ಮತಗಳನ್ನು ಪಡೆದುಕೊಂಡಿದ್ದಾರೆ. ಆ ಮೂಲಕ 92452 ಮತಗಳ ಅಂತರದಿಂದ ಜಾದವ್ ಗೆಲುವು ದಾಖಲಿಸಿಕೊಂಡಿದ್ದಾರೆ. ಗುಲ್ಬರ್ಗದಲ್ಲಿ ಸುಮಾರು ಹತ್ತು ಸಾವಿರ ಮತಗಳು ನೋಟಾಕ್ಕೆ ಚಲಾವಣೆಗೊಂಡಿವೆ.
ಇನ್ನು ಗುಲಬರ್ಗ ಲೋಕಸಭೆ ಕ್ಷೇತ್ರ, ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ರೇವೂ ನಾಯ್ಕ ಬೆಳಮಗಿ ಅವರನ್ನು ಸುಮಾರು 74,733 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಶೇ.58 ರಷ್ಟು ಜನರು ಮತ ಚಲಾವಣೆ ಮಾಡಿದ್ದರು.
ಆದರೆ, ಪ್ರಧಾನಿ ಮೋದಿಯವರ ಅಲೆ ಗುಲ್ಬರ್ಗ ಕ್ಷೇತ್ರಕ್ಕೂ ತಟ್ಟಿದ್ದು, ಪರಿಣಾಮವಾಗಿ ಈ ಬಾರಿ ಬಿಜೆಪಿ ಅಭ್ಯರ್ಥಿಯ ಕೊರಳಿಗೆ ವಿಜಯದ ಹಾರ ಬಿದ್ದಿದೆ. ಇನ್ನು ಕಳೆದ 11 ಅವದಿಯಲ್ಲಿ ಗೆದ್ದು ಬೀಗಿ ಈ ಬಾರಿ ಸೋಲುಂಡಿರುವ ಖರ್ಗೆಯವರು ಜನರ ತೀರ್ಪಿಗೆ ತಲೆ ಬಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವು ಸಾಮಾನ್ಯ ಎನ್ನುವ ಮೂಲಕ ಜನರ ತೀರ್ಪನ್ನು ಸ್ವೀಕರಿಸಿದ್ದಾರೆ.