ಹಾಸನ,ಮೇ 24(Daijiworld News/MSP): ಹಾಸನ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಗೆದ್ದಿರುವ ಪ್ರಜ್ವಲ್ ರೇವಣ್ಣ ಅವರ ಗೆಲುವು ಬಿಸಿ ತುಪ್ಪದಂತಾಗಿದೆ. ಯಾಕೆಂದರೆ ಐದು ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದ ಪ್ರಜ್ವಲ್ ರೇವಣ್ಣ, ತಮ್ಮ ವಿಜಯಕ್ಕೆ ಖುಷಿಪಡುವುದೋ ಅಥವಾ ಕುಟುಂಬ ಹಾಗೂ ಪಕ್ಷದ ಹೀನಾಯ ಸೋಲಿಗೆ ಕೊರಗುವುದೋ ಎಂಬ ಗೊಂದಲದಲ್ಲಿದ್ದಾರೆ.
ಈ ನಡುವೆ ಹಲವು ಬೆಳವಣಿಗೆಗಳ ನಡುವೆ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಶುಕ್ರವಾರ ಹಾಸನದಲ್ಲಿ ಮಾತನಾಡಿದ ಅವರು, ದೇವೇಗೌಡರು ಸೋತಿರುವುದಕ್ಕೆ ನನಗೆ ದುಃಖವಾಗಿದೆ . ಹೀಗಾಗಿ ರಾಜೀನಾಮೆ ನೀಡಿ ಹಾಸನ ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡುತ್ತೇನೆ. ದೇವೇಗೌಡರಿಗೆ ಶಕ್ತಿ ತುಂಬುವುದು ನನ್ನ ಉದ್ದೇಶ ಎಂದಿದ್ದಾರೆ.
ಇನ್ನೊಂದೆಡೆ ನಾಮಪತ್ರ ಸಲ್ಲಿಕೆ ವೇಳೆ ಆಸ್ತಿ ವಿವರದ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂಬ ಆರೋಪ ಪ್ರಜ್ವಲ್ ರೇವಣ್ಣ ಅವರ ಮೇಲಿದೆ. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ವಿವರಗಳನ್ನು ಸರಿಯಾಗಿ ಸಲ್ಲಿಸಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು, ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಹಾಂ ಮತ್ತು ಕಾಂಗ್ರೆಸ್ ಕಾರ್ಯಕರ್ತ ದೇವರಾಜೇಗೌಡ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಈ ಎಲ್ಲ ಆರೋಪಗಳ ಬಗ್ಗೆ ಆದಾಯ ತೆರಿಗೆ ಇಲಾಖೆ ತನಿಖೆ ನಡೆಸಬೇಕು ಎಂದು ಅವರು ಸಲಹೆ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಪ್ರಾನ್ಸಿಸ್ ವರದಿ ನೀಡಿದ್ದಾರೆ. ಇದನ್ನು ಚುನಾವಣಾ ಆಯೋಗ ಗಂಭೀರವಾಗಿ ಸ್ವೀಕರಿಸಿದರೆ, ಆದಾಯ ತೆರಿಗೆ ಇಲಾಖೆಯ ತನಿಖೆಗೆ ಸೂಚನೆ ನೀಡಬಹುದು. ಹೀಗಾಗಿ ಪ್ರಜ್ವಲ್ ರೇವಣ್ಣ ಗೆದ್ದರೂ ಕಂಟಕ ಮಾತ್ರ ತಪ್ಪಿಲ್ಲ.