ಜೆಡ್ಡಾ, ನ.25(DaijiworldNews/AA): 14 ವರ್ಷದ ಬಳಿಕ ಟೀಂ ಇಂಡಿಯಾದ ಮಾಜಿ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ಮರಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡಕ್ಕೆ ಸೇರಿಕೊಂಡಿದ್ದಾರೆ.
ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನ ಎರಡನೇ ದಿನವಾದು ಇಂದು ಆರ್ಸಿಬಿ ತಂಡ ತನ್ನ ಎರಡನೇ ಖರೀದಿಯಾಗಿ ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರೂ.ಗೆ ಖರೀದಿಸಿದೆ. ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಪೈಪೋಟಿ ನಡೆಸಿತ್ತು. ಆದರೆ ಬಿಡ್ ಮೌಲ್ಯ 10 ಕೋಟಿ ರೂ. ದಾಟುತ್ತಿದ್ದಂತೆ ಎರಡು ತಂಡಗಳು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿದಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಆರ್ಸಿಬಿ, ಅಭಿಮಾನಿಗಳು ಮನವಿ ಮಾಡಿದ್ದಕ್ಕೆ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಿದ್ದೇವೆ ಎಂದು ಹೇಳಿದೆ.
ಭುವನೇಶ್ವರ್ ಕುಮಾರ್ ಐಪಿಎಲ್ ಪ್ರಯಾಣ ಪ್ರಾರಂಭಿಸಿದ್ದೇ ಆರ್ಸಿಬಿ ತಂಡದಿಂದ. ಭುವನೇಶ್ವರ್ ಅವರು 2009 ರಲ್ಲಿ ಆರ್ಸಿಬಿ ಸೇರಿದ್ದರು. ಭುವನೇಶ್ವರ್ ಅವರು ಎರಡು ಆವೃತ್ತಿಗಳ ಕಾಲ ಆರ್ಸಿಬಿ ಪರವಾಗಿ ಆಟವಾಡಿದ್ದರು. ನಂತರ 2011 ರಲ್ಲಿ ಪುಣೆ ವಾರಿಯರ್ಸ್ ತಂಡವನ್ನು ಸೇರಿದ್ದರು.