ನವದೆಹಲಿ, ನ.27(DaijiworldNews/AA): ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ ಕುಸ್ತಿಪಟು ಬಜರಂಗ್ ಪುನಿಯಾ ಅವರನ್ನ ನಾಲ್ಕು ವರ್ಷಗಳ ಕಾಲ ಅಮಾನತು ಮಾಡಿದೆ.
ಮಾರ್ಚ್ 10 ರಂದು ಸೋನೆಪತ್ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್ನಲ್ಲಿ ಆಯ್ಕೆಯಾದ ಬಳಿಕ ಪುನಿಯಾ ಮೂತ್ರದ ಮಾದರಿಯನ್ನು ಪರೀಕ್ಷೆಗೆ ನೀಡಲು ನಿರಾಕರಿಸಿದರು. ಇದನ್ನು ನಿಯಮ ಬಾಹಿರ ಎಂದು ನಾಡಾ ಪರಿಗಣಿಸಿ ಪುನಿಯಾ ಅವರನ್ನು ನಾಲ್ಕು ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಕಳೆದ ಏಪ್ರಿಲ್ 23ರಂದು ಪುನಿಯಾರನ್ನ ನಾಡಾ ಮೊದಲಬಾರಿಗೆ ಬ್ಯಾನ್ ಮಾಡಿತ್ತು. ಬಳಿಕ ಅವರನ್ನು ವಿಶ್ವ ಕುಸ್ತಿ ಆಡಳಿತ ಮಂಡಳಿ ಕೂಡ ಅಮಾನತುಗೊಳಿಸಿತ್ತು. ಇದರ ವಿರುದ್ಧ ಪುನಿಯಾ ಮೇಲ್ಮನವಿ ಸಲ್ಲಿಸಿದ್ದರು. ಆದರೆ ನಾಡಾದ ಆಂಟಿ-ಡಿಸಿಪ್ಲಿನರಿ ಡೋಪಿಂಗ್ ಪ್ಯಾನೆಲ್ ಮುಂದಿನ ಸೂಚನೆ ನೀಡುವವರೆಗೆ ಮೇಲ್ಮನವಿಯನ್ನು ರದ್ದು ಮಾಡಲಾಗಿತ್ತು.
ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಯಾಕೆ? ಎಂದು ಜೂನ್ 23 ರಂದು ಪುನಿಯಾ ಅವರಿಗೆ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಸೆ.20 ಮತ್ತು ಅ.4 ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ, ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ. ಜೊತೆಗೆ ಈ ವೇಳೆಯಲ್ಲಿ ಬಜರಂಗ್ ಪುನಿಯಾ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.