ಮುಂಬೈ, ನ.28(DaijiworldNews/ AK):ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವು ಡಿಸೆಂಬರ್ 6 ರಿಂದ ಆರಂಭವಾಗಲಿದೆ. ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಕ್ಯಾನ್ಬೆರಾದಲ್ಲಿ 2 ದಿನಗಳ ಅಭ್ಯಾಸ ಪಂದ್ಯವನ್ನಾಡಲಿದೆ.
ಪೈಮ್ ಮಿನಿಸ್ಟರ್ ಇಲೆವೆನ್ ವಿರುದ್ಧ ನಡೆಯಲಿರುವ ಈ ಪಂದ್ಯವು ಹೊನಲು-ಬೆಳಕಿನಲ್ಲಿ ನಡೆಯಲಿದ್ದು, ಈ ಮೂಲಕ ಟೀಮ್ ಇಂಡಿಯಾ ಪಿಂಕ್ ಬಾಲ್ ಟೆಸ್ಟ್ಗೆ ಸಜ್ಜಾಗಲಿದೆ. ಇದೀಗ ಕ್ಯಾನ್ಬೆರಾಗೆ ಬಂದಿಳಿದಿರುವ ಟೀಂ ಇಂಡಿಯಾ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿದ್ದಾರೆ.
ಈ ಭೇಟಿಯ ಸಂದರ್ಭದಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ನಾಯಕ ರೋಹಿತ್ ಶರ್ಮಾ ಆಸೀಸ್ ಪ್ರಧಾನಿಗೆ ಪರಿಚಯಿಸಿದರು. ಇದೇ ವೇಳೆ ಬುಮ್ರಾ ಜೊತೆ ಸಂವಾದ ನಡೆಸಿದ ಆಂಥೋನಿ ಅಲ್ಬನೀಸ್ ಅವರು, ನಿಮ್ಮ ಬೌಲಿಂಗ್ ಶೈಲಿಯು ಎಲ್ಲರಿಗಿಂತ ವಿಭಿನ್ನವಾಗಿದೆ ಎಂದು ಹೇಳಿದರು. ಅಲ್ಲದೆ ಮೊದಲ ಪಂದ್ಯದಲ್ಲಿನ ಬುಮ್ರಾ ಅವರ ಪ್ರದರ್ಶನವನ್ನು ಶ್ಲಾಘಿಸಿದರು.
ಇನ್ನು ವಿರಾಟ್ ಕೊಹ್ಲಿ ಸಂದರ್ಭದಲ್ಲಿ ಪರ್ತ್ ಶತಕವನ್ನು ಪ್ರಸ್ತಾಪಿಸಿದ ಆಸ್ಟ್ರೇಲಿಯಾ ಪ್ರಧಾನಿ, ನಿಮ್ಮ ಆಟದಿಂದಾಗಿ ನಾವು ತೊಂದರೆಗೀಡಾದವು ಎಂದು ಕಿಚಾಯಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.