ಇಸ್ಲಮಾಬಾದ್, ಡಿ.02(DaijiworldNews/AA): ಕಳೆದ 12 ವರ್ಷಗಳಿಂದ ಭಾರತ ಹಾಗೂ ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಆದರೆ ಉಭಯ ತಂಡಗಳು ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿದೆ. ಆದರೆ ಇದೀಗ ಭಾರತ ಹಾಗೂ ಪಾಕ್ ಯಾವುದೇ ಟೂರ್ನಿಯಲ್ಲೂ ಮುಖಾಮುಖಿಯಾಗಬಾರದು ಎಂದು ಪಾಕಿಸ್ತಾನ್ ತಂಡದ ಮಾಜಿ ವಿಕೆಟ್ ಕೀಪರ್ ಬ್ಯಾಟರ್ ಕಮ್ರಾನ್ ಅಕ್ಮಲ್ ಆಗ್ರಹಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ್ ದ್ವಿಪಕ್ಷೀಯ ಸರಣಿ ಆಡದ ಹೊರತು ಯಾವುದೇ ಟೂರ್ನಿಯಲ್ಲೂ ಮುಖಾಮುಖಿಯಾಗಬಾರದು. ಸರಣಿ ಆಡಲು ಸಾಧ್ಯವಾಗದಿದ್ದರೆ, ಪ್ರಮುಖ ಟೂರ್ನಿಯಲ್ಲೇಕೆ ಉಭಯ ತಂಡಗಳು ಮುಖಾಮುಖಿಯಾಗಬೇಕೆಂದು ಕಮ್ರಾನ್ ಅಕ್ಮಲ್ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಐಸಿಸಿ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಭಾರತವು ಕ್ರೀಡೆಯೊಂದಿಗೆ ರಾಜಕೀಯ ಮಾಡುತ್ತಿದೆ. ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಹೈಬ್ರಿಡ್ ಮಾದರಿಯ ಬೇಡಿಕೆ ಮುಂದಿಟ್ಟಿದೆ. ಅಲ್ಲದೆ ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದೆ. ಇಲ್ಲಿ ಪಾಕಿಸ್ತಾನ್ ತಂಡದ ಜೊತೆ ದ್ವಿಪಕ್ಷೀಯ ಸರಣಿಯ ಅವಶ್ಯಕತೆಯಿಲ್ಲದಿದ್ದರೂ, ಭಾರತ ಐಸಿಸಿ ಟೂರ್ನಿಯಲ್ಲಿ ಪಾಕಿಸ್ತಾನ್ ತಂಡವನ್ನು ಎದುರಿಸುತ್ತಿದೆ. ಇದಕ್ಕಾಗಿ ಐಸಿಸಿ ಪ್ರತಿ ಟೂರ್ನಿಯಲ್ಲೂ ಭಾರತ-ಪಾಕಿಸ್ತಾನ್ ಪಂದ್ಯವನ್ನು ಏರ್ಪಡಿಸುತ್ತಿದೆ.
ಆದರೆ ದ್ವಿಪಕ್ಷೀಯ ಸರಣಿ ಆಡಲು ಸಮಸ್ಯೆಯಿರುವ ಭಾರತಕ್ಕೆ ಐಸಿಸಿ ಟೂರ್ನಿಯಲ್ಲಿ ಪಾಕ್ ವಿರುದ್ಧ ಆಡಲು ಯಾವುದೇ ಸಮಸ್ಯೆಯಿಲ್ಲ. ಹೀಗಾಗಿ ದ್ವಿಪಕ್ಷೀಯ ಸರಣಿಯನ್ನು ಪುನರಾಂಭಿಸದ ಹೊರತಾಗಿ ಪಾಕಿಸ್ತಾನ್ ತಂಡವು ಭಾರತದ ವಿರುದ್ಧ ಯಾವುದೇ ಪಂದ್ಯವಾಡಬಾರದು. ಸದ್ಯ ಚಾಂಪಿಯನ್ಸ್ ಟ್ರೋಫಿ ಚರ್ಚೆ ನಡೆಯುತ್ತಿದ್ದು, ಇದೇ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ದ್ವಿಪಕ್ಷೀಯ ಸರಣಿಗಾಗಿ ಐಸಿಸಿ ಮುಂದೆ ಬೇಡಿಕೆಯಿಡಬೇಕು. ಇಲ್ಲದಿದ್ದರೆ ಐಸಿಸಿ ಟೂರ್ನಿಯಲ್ಲೂ ಆಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.