ಲಾಹೋರ್, ಫೆ.09 (DaijiworldNews/AA): ಪಾಕಿಸ್ತಾನ್ ವಿರುದ್ಧದ ಮೊದಲ ಏಕದಿನ ಪಂದ್ಯದ ವೇಳೆ ನ್ಯೂಝಿಲೆಂಡ್ ಆಟಗಾರ ರಚಿನ್ ರವೀಂದ್ರ ಮುಖಕ್ಕೆ ಚೆಂಡು ಬಿದ್ದು ಗಂಭೀರ ಗಾಯಗೊಂಡ ಪರಿಣಾಮ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ.

ಲಾಹೋರ್ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡಿತ್ತು. ಈ ವೇಳೆ ನ್ಯೂಝಿಲೆಂಡ್ ತಂಡವು 50 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 330 ರನ್ ಗಳಿಸಿತು.
ನಂತರ 331 ರನ್ಗಳ ಗುರಿ ಬೆನ್ನತ್ತಿದ ಪಾಕ್ ತಂಡವು 35 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು. ಈ ಹಂತದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಎಡಗೈ ದಾಂಡಿಗ ಖುಷ್ದಿಲ್ ಶಾ, ಮೈಕೆಲ್ ಬ್ರೇಸ್ವೆಲ್ ಎಸೆದ 38ನೇ ಓವರ್ನ 3ನೇ ಎಸೆತದಲ್ಲಿ ಡೀಪ್ ಬ್ಯಾಕ್ವರ್ಡ್ ಸ್ಕ್ವೇರ್ನತ್ತ ಬಾರಿಸಿದ್ದರು.
ಈ ವೇಳೆ ಬೌಂಡರಿ ಲೈನ್ನಲ್ಲಿದ್ದ ರಚಿನ್ ರವೀಂದ್ರ ಕ್ಯಾಚ್ ಹಿಡಿಯಲು ಓಡಿ ಬಂದಿದ್ದಾರೆ. ಆದರೆ ಫ್ಲಡ್ಲೈಟ್ ಬೆಳಕಿನಿಂದಾಗಿ ಚೆಂಡನ್ನು ಸರಿಯಾಗಿ ಗುರುತಿಸುವಲ್ಲಿ ರಚಿನ್ ವಿಫಲರಾಗಿದ್ದಾರೆ. ಪರಿಣಾಮ ಬಾಲ್ ನೇರವಾಗಿ ಮುಖಕ್ಕೆ ಬಡಿದಿದೆ.
ಕೂಡಲೇ ವೈದ್ಯಕೀಯ ಸಿಬ್ಬಂದಿಗಳು ಮೈದಾನಕ್ಕೆ ಆಗಮಿಸಿದ್ದು, ಈ ವೇಳೆ ಅವರ ಮುಖದಿಂದ ರಕ್ತ ಬರುತ್ತಿರುವುದು ಕಂಡು ಬಂದಿದೆ. ರಚಿನ್ ತಮಗಾದ ಗಂಭೀರ ಗಾಯದಿಂದ ಅರ್ಧದಲ್ಲೇ ಮೈದಾನ ತೊರೆಯುವಂತಾಗಿದೆ.