ಮುಂಬೈ,ಫೆ.28 (DaijiworldNews/AK): ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ತಲುಪಿದೆ. ಆದರೂ ಗುಂಪು ಹಂತದಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇದೆ. ಅದು ಮಾರ್ಚ್ 2 ರಂದು ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ.

ಬಳಿಕ ಭಾರತ ತಂಡವು ಮಾರ್ಚ್ 4 ರಂದು ದುಬೈನಲ್ಲಿ ಸೆಮಿಫೈನಲ್ ಪಂದ್ಯವನ್ನು ಆಡಬೇಕಾಗುತ್ತದೆ. ಈ ಮಹತ್ವದ ಪಂದ್ಯಕ್ಕೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಗಾಯದಿಂದ ತಂಡದಿಂದ ಹೊರ ಬಿದ್ದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ನಲ್ಲಿರುವ ಬುಮ್ರಾ, ಇದೀಗ ಫಿಟ್ ಆಗಿದ್ದು ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಇದರ ವಿಡಿಯೋವನ್ನು ಬುಮ್ರಾ ಹಂಚಿಕೊಂಡಿದ್ದು, ಸೆಮಿಫೈನಲ್ಗೂ ಮುನ್ನ ಟೀಂ ಇಂಡಿಯಾವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಬೆನ್ನು ನೋವಿನಿಂದಾಗಿ ಜಸ್ಪ್ರೀತ್ ಬುಮ್ರಾ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದರು. ರಿಹ್ಯಾಬ್ಗಾಗಿ ಬೆಂಗಳೂರಿನ ಎನ್ಸಿಎ ಸೇರಿಕೊಂಡಿದ್ದ ಬುಮ್ರಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಮೈದಾನದಿಂದ ದೂರವಿದ್ದ ಬುಮ್ರಾ ಈಗ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ.