ಉಡುಪಿ, ಮಾ.02 (DaijiworldNews/AA): ಖ್ಯಾತ ಭಾರತೀಯ ಕ್ರಿಕೆಟಿಗ ಮತ್ತು ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರು ತಮ್ಮ ಪತ್ನಿ ದೇವಿಷಾ ಶೆಟ್ಟಿ ಅವರೊಂದಿಗೆ ಕಾಪು ಮಾರಿಗುಡಿ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದರು.



ಕರಾವಳಿ ಕರ್ನಾಟಕ ಪ್ರದೇಶದವರಾದ ಸೂರ್ಯಕುಮಾರ್ ಯಾದವ್ ಅವರ ಪತ್ನಿ, ೨೦೨೪ರ ಜುಲೈನಲ್ಲಿ ಕಾಪು ಮಾರಿಗುಡಿಗೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಅಭಿವೃದ್ಧಿಯ ಭಾಗವಾಗಿ ಒಂದು ಕಂಬವನ್ನು ಸಹ ನೀಡಿದ್ದರು. ನಿರ್ಮಾಣ ಹಂತದಲ್ಲಿದ್ದ ಕಾಪು ಮಾರಿಯಮ್ಮ ದೇವಸ್ಥಾನವನ್ನು ನೋಡಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು. ಹಾಗೂ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿ ಭೇಟಿ ನೀಡುವುದಾಗಿ ತಿಳಿಸಿದ್ದರು.
ಇದೀಗ ಸೂರ್ಯಕುಮಾರ್ ಯಾದವ್ ಅವರು ಪತ್ನಿಯೊಂದಿಗೆ ಪ್ರತಿಷ್ಠಾ ಬ್ರಹ್ಮಕಲದ ಸಂದರ್ಭದಲ್ಲಿ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದರು. ಈ ವೇಳೆ ಮಾತನಾಡಿದ ಅವರು, ಹಿಂದೆ ಬಂದಾಗಲೂ ದೇವಸ್ಥಾನ ಖುಷಿ ಕೊಟ್ಟಿತ್ತು. ಆಗಲೂ ನಾವು ದೇವರಿಗೆ ಧನ್ಯವಾದ ಹೇಳಿದ್ದೆವು. ಈಗಲೂ ಧನ್ಯವಾದ ಹೇಳಿದೆವು. ಕಳೆದ ಬಾರಿ ಬಂದಾಗ ದೇವಸ್ಥಾನದ ಕೆಲಸ ನಡೆಯುತ್ತಿತ್ತು. ಈಗ ಸಂಪೂರ್ಣ ಬೇರೆಯೇ ಕಾಣುತ್ತಿದೆ. ಖುಷಿಯಾಗುತ್ತಿದೆ ಎಂದರು.
ಕಳೆದ ಬಾರಿ ಬಂದಾಗ ಟಿ 20 ತಂಡದ ನಾಯಕನಾಗಬೇಕು ಎಂದು ಅರ್ಚಕರು ಪೂಜೆ ಮಾಡಿದ್ದರು. ಎಲ್ಲಾ ದೇವರ ಆಶೀರ್ವಾದ. ಅಮ್ಮನ ಆಶೀರ್ವಾದದಿಂದ ಈಗ ನಾನು ನಾಯಕನಾಗಿದ್ದೇನೆ. ಮುಂದೆಯೂ ಒಳ್ಳೆಯದಾಗುತ್ತದೆ ಎಂದು ಭಾವಿಸಿದ್ದೇನೆ ಎಂದು ಅವರು ಹೇಳಿದರು.
ಸೂರ್ಯಕುಮಾರ್ ಯಾದವ್ ಮತ್ತು ಅವರ ಪತ್ನಿ ದೇವಿಷಾ ಶೆಟ್ಟಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಗತ ಸಮಿತಿಯ ಆಚರಣೆಯ ಅಂಗವಾಗಿ ಸನ್ಮಾನಿಸಲಾಯಿತು.