ಲಂಡನ್, ಜೂ16(Daijiworld News/SS): ಪಾಕ್ ವಿರುದ್ಧ ನಡೆಯುವ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪಾಕ್ ವಿರುದ್ಧ ಪಂದ್ಯದ ಬಗ್ಗೆ ಅಭಿಮಾನಿಗಳು ಭಾವುಕರಾಗಬೇಕಿಲ್ಲ. ಎಲ್ಲಾ ವಿಶ್ವಕಪ್ ಪಂದ್ಯಗಳಂತೆ ಇದು ಒಂದು ಪಂದ್ಯ ಅಷ್ಟೇ. ಆಟವನ್ನು ಎಂಜಾಯ್ ಮಾಡಿ. ಖಂಡಿತ ತಂಡಕ್ಕೆ ಜಯ ಸಿಗಲಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡ ಬಲಿಷ್ಠವಾಗಿದ್ದು, ಸಾಕಷ್ಟು ಅನುಭವಿ ಆಟಗಾರನನ್ನು ಹೊಂದಿದೆ. ಯಾರು ಚೆನ್ನಾಗಿ ಆಡುತ್ತಾರೆ ಅವರಿಗೆ ಗೆಲುವು ಖಚಿತ. ಇಂಗ್ಲೆಂಡ್ಗೆ ಆಗಮಿಸಿದ ಬಳಿಕ ಪಾಕ್ ವಿರುದ್ಧ ಪಂದ್ಯದ ಬಗ್ಗೆ ಭಿನ್ನವಾಗಿ ಏನು ಚರ್ಚೆ ನಡೆಸಿಲ್ಲ ಎಂದು ತಿಳಿಸಿದರು.
ಪಂದ್ಯಕ್ಕಾಗಿ ತಂಡದ ಡ್ರೇಸಿಂಗ್ ರೂಮ್ ವಾತಾವರಣವೂ ಬದಲಾಗಿಲ್ಲ. ಎಲ್ಲಾ ಪಂದ್ಯಗಳನ್ನು ಸಮನಾಗಿ ಪರಿಗಣಿಸಿ ದೇಶದ ಪರ ಆಡುತ್ತೇವೆ. ನಮ್ಮ ಸಾಮರ್ಥ್ಯವನ್ನು ಅರಿತು ಆಡುತ್ತೇವೆ ಎಂದು ಹೇಳಿದ್ದಾರೆ.
2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಕೌಂಟ್ಡೌನ್ ಆರಂಭವಾಗಿದ್ದು, ಇತ್ತಂಡಗಳು ಗೆಲುವಿನ ಲೆಕ್ಕಾಚಾರಗಳನ್ನು ಆರಂಭಿಸಿವೆ. 2015ರ ವಿಶ್ವಕಪ್ ಬಳಿಕ ಪಾಕಿಸ್ತಾನ ಮತ್ತು ಭಾರತದ ತಂಡಗಳು ನಾಲ್ಕು ಭಾರೀ ಮಾತ್ರ ಮುಖಾಮುಖಿಯಾಗಿದೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗೂ ಎರಡು ತಂಡಗಳು 131 ಪಂದ್ಯಗಳನ್ನು ಆಡಿದ್ದು, ಭಾರತ 54 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೆ, ಪಾಕ್ 73 ಪಂದ್ಯಗಳಲ್ಲಿ ಗೆದ್ದಿದೆ. 1978 ರಲ್ಲಿ ಭಾರತ ಹಾಗೂ ಪಾಕಿಸ್ತಾನ ಮೊದಲ ಏಕದಿನ ಟೂರ್ನಿಯನ್ನ ಆಡಿದ್ದವು.
ಇತ್ತೀಚಿನ ಪಂದ್ಯಗಳ ಫಲಿತಾಂಶವನ್ನು ಪರಿಗಣಿಸುವುದಾದರೆ 2006ರ ಬಳಿಕ ಎರಡು ತಂಡಗಳು 30 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 19 ರಲ್ಲಿ ಭಾರತ, 11 ರಲ್ಲಿ ಪಾಕ್ ಗೆಲುವು ಪಡೆದಿದೆ.