ವಾರಾಣಸಿ, ಜೂ16(Daijiworld News/SS): ಇಂದು ನಡೆಯಲಿರುವ ಐಸಿಸಿ 2019 ಏಕದಿನ ವಿಶ್ವಕಪ್ನ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾವು ಸಾಂಪ್ರಾದಾಯಿಕ ಬದ್ಧ ವೈರಿ ಪಾಕಿಸ್ತಾನ ಸವಾಲನ್ನು ಎದುರಿಸಲಿದೆ. ಕ್ರಿಕೆಟ್ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ವೀಕ್ಷಿಸಲು ಜಗತ್ತಿನಾದ್ಯಂತ ಇರುವ ಕ್ರಿಕೆಟ್ ಪ್ರೇಮಿಗಳು ಟಿವಿಗಳ ಮುಂದೆ ಪ್ರತಿಷ್ಠಾಪನೆಗೊಳ್ಳಲಿದ್ದಾರೆ. ಜೊತೆಗೆ ಕುತೂಹಲವೂ ಹೆಚ್ಚಾಗಿದೆ.
ದೇಶದ ಹಲವೆಡೆ ವಿರಾಟ್ ಕೊಹ್ಲಿ ಬಳಗದ ಗೆಲುವನ್ನು ಹಾರೈಸಿ ಭಾರತದಾದ್ಯಂತ ವಿಶೇಷ ಪೂಜೆ, ಹವನ, ಹೋಮಗಳನ್ನು ಮಾಡಲಾಗುತ್ತಿದೆ. ವಿಶೇಷವೆಂದರೆ, ವಾರಾಣಸಿಯ ಜನರು ಪಾಕ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವಿಗಾಗಿ ಹಾರೈಸಿ ವಿಶೇಷ ಗಾಂಗಾರತಿ ನೆರವೇರಿಸಿದ್ದಾರೆ.
ಭಾರತದ ತ್ರಿವರ್ಣ ಧ್ವಜದ ಜತೆಗೆ ತಂಡದ ಆಟಗಾರರ ಭಾವಚಿತ್ರವಿರುವ ಬ್ಯಾನರ್ ಹಿಡಿದು, ಗಂಗಾ ನದಿಯಲ್ಲಿ ಎದೆಮಟ್ಟದ ನೀರಿನಲ್ಲಿ ನಿಂತು ವಿಶೇಷ ಆರತಿ ನೆರವೇರಿಸಿದರು.
ಈ ಹಿಂದಿನ 6 ವಿಶ್ವಕಪ್ ಕಾದಾಟಗಳಲ್ಲಿ ಭಾರತ ಆರರಲ್ಲಿ ಆರೂ ಪಂದ್ಯಗಳನ್ನು ಗೆದ್ದಿದೆ, ಪಾಕಿಸ್ಥಾನ ಆರರಲ್ಲೂ ಸೋಲಿನ ಮುಖಭಂಗ ಅನುಭವಿಸಿದೆ. ಹೀಗಾಗಿ ಈ ಬಾರಿ ಭಾರತ ಗೆದ್ದರೆ ಸತತ ಎಳನೇ ಬಾರಿ ಗೆಲುವಿನ ದಾಖಲೆ ಬರೆಯಲಿದೆ. ಸೋತರೆ ಪ್ರಥಮ ಸಾರಿ ವಿಶ್ವಕಪ್ನಲ್ಲಿ ಪಾಕ್ ಎದುರು ಸೋಲಿನ ಕಹಿ ಅನುಭವಿಸಲಿದೆ.